ರಾಜ್ಕೋಟ್ : ರಾಜ್ಕೋಟ್ನಲ್ಲಿ ಶನಿವಾರ (ಜನವರಿ 7) ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ತಮ್ಮ ಪ್ರತಾಪ ತೋರಿದ್ದರು. 51 ಎಸೆತಗಳಲ್ಲಿ 112 ರನ್ ಬಾರಿಸಿದ ಅವರು ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಎದ್ದು, ಬಿದ್ದು, ಮಲಗಿ ವಿಸ್ಫೋಟಕ ಬ್ಯಾಟ್ ಮಾಡಿದ ಅವರು ತಮ್ಮ ವೃತ್ತಿ ಕ್ರಿಕೆಟ್ನ 3ನೇ ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.
ಸೂರ್ಯಕುಮಾರ್ ಅವರ ಆಟವನ್ನು ನೋಡಿದ ರಾಜ್ಕೋಟ್ನಲ್ಲಿ ಸೇರಿದ್ದ ಕ್ರಿಕೆಟ್ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದರು. ಜತೆಗೆ ಕೋಚ್ ದ್ರಾವಿಡ್ ಕೂಡ ಸೂರ್ಯಕುಮಾರ್ ಅವರ ಆಟಕ್ಕೆ ಮನಸೋತಿದ್ದಾರೆ. ಹೀಗಾಗಿ ಅವರು ಪಂದ್ಯ ಮುಗಿದ ಬಳಿಕ ವಿಭಿನ್ನ ರೀತಿಯಲ್ಲಿ ಪ್ರಶಂಸೆ ನೀಡಿದ್ದಾರೆ. ಅದಕ್ಕೆ ಸೂರ್ಯಕುಮಾರ್ ಜೋರಾಗಿ ನಕ್ಕು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಪಂದ್ಯದ ಮುಕ್ತಾಯದ ಬಳಿಕ ದ್ರಾವಿಡ್ ಮತ್ತು ಸೂರ್ಯಕುಮಾರ್ ಪರಸ್ಪರ ಟಿವಿ ಸಂಭಾಷಣೆ ಮಾಡಿದ್ದರು. ಈ ವೇಳೆ ದ್ರಾವಿಡ್ ನೀವು ನನ್ನ ಆಟವನ್ನು ಬಾಲ್ಯದಲ್ಲಿ ನೋಡಿಲ್ಲ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ. ಅದಕ್ಕೆ ಜೋರಾಗಿ ನಕ್ಕ ಸೂರ್ಯಕುಮಾರ್, ಖಂಡಿತವಾಗಿಯೂ ನಿಮ್ಮ ಆಟವನ್ನು ನೋಡಿದ್ದೇನೆ ಎಂಬುದಾಗಿ ನುಡಿಯುತ್ತಾರೆ.
ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ನಿಧಾನಗತಿ ಆಟದ ಮೂಲಕವೇ ಪ್ರಖ್ಯಾತಿ ಪಡೆದವರು. ಅವರು ಬ್ಯಾಟಿಂಗ್ಗೆ ಬಂದ ಬಳಿಕ ಖಾತೆ ತೆರೆಯಲು ಹಲವು ಎಸೆತಗಳನ್ನು ತೆಗೆದುಕೊಳ್ಳುತ್ತಿದ್ದರು. ಆದಾಗ್ಯೂ ದ್ರಾವಿಡ್ ಅವರ ಆಟಕ್ಕೆ ಸರಿಮಾನವಾದ ನೀಡಲು ಇದುವರೆಗೆ ಯಾರಿಗೂ ಆಗಿಲ್ಲ. ಗೋಡೆ ಎಂಬ ಖ್ಯಾತಿ ಹೊಂದಿರುವ ಅವರನ್ನು ಔಟ್ ಮಾಡುವುದು ಕೂಡ ಸುಲಭವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡಿದ ದ್ರಾವಿಡ್, ನನ್ನ ಆಟವನ್ನು ನೋಡಿ ಬೆಳೆದಿದ್ದರೆ ಇಷ್ಟೊಂದು ನಿರ್ದಾಕ್ಷಿಣ್ಯವಾಗಿ ಬ್ಯಾಟ್ ಮಾಡುತ್ತಿರಲಿಲ್ಲ ಎಂಬರ್ಥದಲ್ಲಿ ಪ್ರಶಂಸೆ ಕೊಟ್ಟಿದ್ದಾರೆ.
ಇದನ್ನೂ ಓದಿ | IND VS SL | ಲಂಕಾ ವಿರುದ್ಧ ಶತಕ ಬಾರಿಸಿ ದಾಖಲೆ ಬರೆದ ಸೂರ್ಯಕುಮಾರ್ ಯಾದವ್