ಮುಂಬಯಿ: ಜಮ್ಮು ಕಾಶ್ಮೀರದ ಪ್ಯಾರಾ ಕ್ರಿಕೆಟಿಗ ಅಮೀರ್ ಹುಸೇನ್ ಲೋನ್(Amir Hussain Lone) ಅವರಿಗೆ ಅದಾನಿ ಫೌಂಡೇಶನ್(Adani Foundation) ಆರ್ಥಿಕ ಸಹಾಯವನ್ನು ನೀಡಲು ನಿರ್ಧರಿಸಿದೆ. ಈ ಮೂಲಕ ಬಡ ಕ್ರಿಕೆಟಿಗನ ಬಾಳಲ್ಲಿ ಸಂತಸದ ದಿನಗಳನ್ನು ಕಳೆಯುವಂತೆ ಮಾಡಿದೆ. ನೆರವು ನೀಡಿದ ಅದಾನಿಗೆ ಅಮೀರ್ ತಾಯಿ ಧನ್ಯವಾದ ತಿಳಿಸಿದ್ದಾರೆ.
ಅಮೀರ್ ಹುಸೇನ್ ಲೋನ್ ಅವರಿಗೆ ಕ್ರಿಕೆಟ್ ಆಡಲು ಬೇಕಾದ ಮತ್ತು ಅವರ ಕುಟುಂಬಕ್ಕೂ ಆರ್ಥಿಕ ಧನ ಸಹಾಯ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಅದಾನಿ ಗ್ರೂಪ್ ಆಫ್ ಫೌಂಡೇಶನ್ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ದುರಂತದಲ್ಲಿ ಕೈ ಕಳೆದುಕೊಂಡ ಅಮೀರ್…
24 ವರ್ಷದ ಅಮೀರ್ ಹುಸೈನ್ ಲೋನ್ ಎರಡೂ ಕೈಗಳು ಇಲ್ಲದಿದ್ದರೂ ಕೂಡ ಅದ್ಭುತವಾಗಿ ಕ್ರಿಕೆಟ್ ಆಡುತ್ತಾರೆ. ತನ್ನ ಕಾಲಿನಿಂದ ಬೌಲಿಂಗ್ ಮಾಡುತ್ತಾರೆ. ಅವರ ಈ ಸಾಹಸದ ವಿಡಿಯೊ ಎಲ್ಲಡೆ ವೈರಲ್ ಆಗಿದೆ. ಹುಟ್ಟುವಾಗ ಎಲ್ಲರಂತೆ ಸಹಜವಾಗಿ ಎರಡು ಕೈಗಳ ಸಮೇತವೇ ಹುಟ್ಟಿದ ಅಮೀರ್ ತನ್ನ ಕೈಗಳನ್ನು ಕಳೆದುಕೊಂಡದ್ದು ಒಂದು ದುರಂತದಲ್ಲಿ. 8 ವರ್ಷದವರಿದ್ದಾಗ ತನ್ನ ತಂದೆಯ ಮರದ ಮಿಲ್ಲೊಂದರಲ್ಲಿ ಇದ್ದ ಯಂತ್ರವೊಂದಕ್ಕೆ ಕೈಗಳು ಸಿಲುಕಿ ಅಮೀರ್ ತಮ್ಮ ಎರಡು ಕೈಗಳನ್ನು ಕಳೆದುಕೊಂಡರು.
ಇದನ್ನೂ ಓದಿ ತೆಲಂಗಾಣದಲ್ಲಿ ಅದಾನಿ 12,400 ಕೋಟಿ ರೂ. ಹೂಡಿಕೆ; ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ ಒಪ್ಪಂದ
ಬದುಕುವ ಛಲ ಬಿಡದ ಅವರು ಈ ಆಘಾತದಿಂದ ನಿಧಾನವಾಗಿ ಚೇತರಿಸಿಕೊಂಡ ಬಳಿಕ ತನ್ನ ಎಲ್ಲ ಕೆಲಸಗಳನ್ನು ಕಾಲುಗಳಿಂದ ಮಾಡಲು ಅಭ್ಯಾಸ ಮಾಡಿಕೊಂಡರು. ತಮ್ಮ ಗೆಳೆಯರೊಂದಿಗೆ ಕ್ರಿಕೆಟ್ ಕೂಡ ಆಡಲು ಆರಂಭಿಸಿದರು. ಹೀಗೆ ಹಂತ ಹಂತವಾಗಿ ಕ್ರಿಕೆಟ್ ಕೌಶಲವನ್ನು ಹೆಚ್ಚಿಸಿಕೊಂಡ ಅಮೀರ್ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ.
ಬದುಕು ಬದಲಿಸಿದ ಶಿಕ್ಷಕ…
ಜಮ್ಮು ಕಾಶ್ಮೀರದ ಬಿಜ್ಬೆಹರಾದ ವಘಮ್ ಗ್ರಾಮದ ನಿವಾಸಿಯಾದ ಅಮೀರ್ ಅವರನ್ನು ಕ್ರಿಕೆಟ್ ಆಟಗಾರನಾಗಿ ಮಾಡುವಲ್ಲಿ ಶಿಕ್ಷಕರೊಬ್ಬರ ಪಾತ್ರ ಮುಖ್ಯವಾಗಿತ್ತು. ಶಾಲಾ ದಿನಗಳಲ್ಲಿಯೇ ಕೈ ಇರದಿದ್ದರೂ ಕೂಡ ಕ್ರಿಕೆಟ್ ಆಡಲು ಪ್ರಯತ್ನಿಸುತ್ತಿರುವುದನ್ನು ಕಂಡ ಶಿಕ್ಷಕರೊಬ್ಬರು ಈತನನ್ನು ಕಾಶ್ಮೀರದ ಪ್ಯಾರಾ ಕ್ರಿಕೆಟ್ ಟೀಮ್‌ಗೆ ಪರಿಚಯಿಸಿದ್ದರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅಮೀರ್ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕನಾಗಿ ಮಿಂಚಿದ್ದಾರೆ.
ಅಮೀರ್ ತನ್ನ ಕತ್ತು ಮತ್ತು ಭುಜದ ಸಹಾಯದಿಂದ ಬ್ಯಾಟಿಂಗ್ ನಡೆಸುತ್ತಾರೆ. ಕಾಲಿನ ಬೆರಳುಗಳ ಮಧ್ಯೆ ಚೆಂಡನ್ನು ಸಿಕ್ಕಿಸಿ ಬೌಲಿಂಗ್ ಮಾಡುವ ಛಾತಿ ಹೊಂದಿದ್ದಾರೆ. ಅವರ ಕ್ರಿಕೆಟ್ ಬದುಕಿನ ಸಂಪೂರ್ಣ ಚಿತ್ರಣವನ್ನು ಎಎನ್ಐ ವಿಶೇಷ ಎಪಿಸೋಡ್ ಮೂಲಕ ಜಗತ್ತಿಗೆ ಪರಿಚಯಿಸಿತ್ತು. ಅಮೀರ್ ಅವರ ಈ ಸಾಧನೆಗೆ ಸಚಿನ್ ತೆಂಡೂಲ್ಕರ್ ಸೇರಿ ವಿಶ್ವದ ಅನೇಕ ಕ್ರೀಡಾಪಟುಗಳು ಪ್ರಶಂಸೆ ವ್ಯಕ್ತಪಡಿಸಿದ್ದರು.
ಅಮೀರ್ ಅವರ ಸಾಹಸಗಾಥೆಯನ್ನು ಸಿನಿಮಾ ಮಾಡಲು ಬಾಲಿವುಡ್‌ನ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆ ಪಿಕಲ್ ಎಂಟರ್‌ಟೈನ್‌ಮೆಂಟ್ ಮುಂದೆ ಬಂದಿದೆ. ಈ ಸಿನೆಮಾಗೆ ಅಮೀರ್ ಎಂದು ಹೆಸರಿಡಲು ಚಿತ್ರ ತಂಡ ನಿರ್ಧರಿಸಿದೆ. ಈ ಸಿನಿಮಾಗೆ ಬಿಗ್ ಬ್ಯಾಟ್ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಮಹೇಶ್ ವಿ ಭಟ್ ನಿರ್ದೇಶನ ಮಾಡಲಿದ್ದಾರೆ.