ಲಂಡನ್: ಚೊಚ್ಚಲ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹರಾಜಿನಲ್ಲಿ(WPL Auction) ಯಾವುದೇ ತಂಡದ ಪಾಲಾಗದ ಇಂಗ್ಲೆಂಡ್ ಬ್ಯಾಟರ್ ಡೇನಿಯಲ್ ವ್ಯಾಟ್(Danielle Wyatt) ಬೇಸರದಿಂದ ಹೃದಯ ಒಡೆದು ಹೋಯಿತೆಂದು ಟ್ವಿಟ್ ಮಾಡಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ವ್ಯಾಟ್ ಅವರು ಡಬ್ಲ್ಯುಪಿಎಲ್ ಹರಾಜಿನಲ್ಲಿ 50 ಲಕ್ಷ ರೂ. ಮೂಲ ಬೆಲೆಯೊಂದಿಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದರು. ಆದರೆ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಯು ಅವರನ್ನು ಖರೀದಿ ಮಾಡಲು ಮುಂದಾಗಲಿಲ್ಲ. ಇದರಿಂದ ಬೇಸರಗೊಂಡ ಅವರು “ಡಬ್ಲ್ಯುಪಿಎಲ್ನಲ್ಲಿ ಆಡುವ ನನ್ನ ಕನಸು ನನಸಾಗಲಿಲ್ಲ. ಟೂರ್ನಿಯಲ್ಲಿ ಆಡಲು ಅವಕಾಶ ಸಿಗದೇ ಇರುವುದಕ್ಕೆ ನನ್ನ ಹೃದಯ ಹೋದಂತಾಗಿದೆ. ಈ ಟೂರ್ನಿಯ ಭಾಗವಾದ ಎಲ್ಲ ಆಟಗಾರ್ತಿಯರಿಗೂ ಅಭಿನಂದನೆ’ ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಭಾರತದಲ್ಲಿ ನಡೆದ ಟಿ20 ಚಾಲೆಂಜ್ ಟೂರ್ನಿಯಲ್ಲಿ ಅವರು ಪಾಲ್ಗೊಂಡಿದ್ದರು. ಆದರೆ ಚೊಚ್ಚಲ ಆವೃತ್ತಿಯ ಮಹಿಳೆಯರ ಐಪಿಎಲ್ ಟೂರ್ನಿಯಲ್ಲಿ ಅವರಿಗೆ ಯಾವುದೇ ತಂಡ ಮಣೆಹಾಕಲಿಲ್ಲ. ಬಲಗೈ ಬ್ಯಾಟರ್ ದಿ ಹಂಡ್ರೆಡ್ ಮತ್ತು ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನಂತಹ ಟಿ20 ಪಂದ್ಯಾವಳಿಗಳಲ್ಲಿ ಆಡಿದ್ದಾರೆ.
ಇದನ್ನೂ ಓದಿ WPL 2023: ಅತ್ಯಧಿಕ ಮೊತ್ತಕ್ಕೆ ಹರಾಜಾದ 5 ಆಟಗಾರ್ತಿಯರ ಪಟ್ಟಿ
ಒಟ್ಟು 140 ಟಿ20 ಪಂದ್ಯಗಳನ್ನು ಆಡಿರುವ ಅವರು ಎರಡು ಶತಕ ಮತ್ತು 10 ಅರ್ಧಶತಕ ಸೇರಿದಂತೆ 2276 ರನ್ ಗಳಿಸಿದ್ದಾರೆ. ಜತೆಗೆ ಬೌಲಿಂಗ್ನಲ್ಲಿಯೂ ಮಿಂಚಿದ್ದು 46 ವಿಕೆಟ್‌ಗಳನ್ನು ಪಡೆದಿದ್ದಾರೆ. 31 ವರ್ಷದ ಅವರು 102 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.