Site icon Vistara News

Virat kohli | ವಿರಾಟ್‌ ಕೊಹ್ಲಿಗೆ ಸ್ಮರಣೀಯವಾಗಲಿದೆ ದುಬೈ ಪಿಚ್‌, ಇಲ್ಲಿದೆ ನೋಡಿ ಕಾರಣಗಳು

virat kohli

ದುಬೈ : ಅಫಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್‌-೪ ಪಂದ್ಯದಲ್ಲಿ ಶತಕ ಬಾರಿಸಿದ ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ, ಪಂದ್ಯ ನಡೆದ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಮ್‌ ಸ್ಮರಣೀಯ ಎನಿಸಿಕೊಳ್ಳಲಿದೆ. ಯಾಕೆಂದರೆ ಶತಕದ ದಾಖಲೆಯ ಜತೆಗೆ ವಿರಾಟ್‌ ಇನ್ನೂ ಐದು ದಾಖಲೆಗಳನ್ನು ತಮ್ಮೆಸರಿಗೆ ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಬಾರಿಸಿರುವ ಅಜೇಯ ೧೨೨ ರನ್‌ ಟಿ೨೦ ಮಾದರಿಯಲ್ಲಿ ಭಾರತೀಯ ಆಟಗಾರನೊಬ್ಬ ದಾಖಲಿಸಿದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಈ ಮೂಲಕ ಅವರು ರೋಹಿತ್‌ ಶರ್ಮ ೨೦೧೭ರಲ್ಲಿ ಗಳಿಸಿದ್ದ ೧೧೮ ರನ್‌ಗಳ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್‌ ಕೊಹ್ಲಿ ೫೩ ಎಸೆತಗಳಲ್ಲಿ ಶತಕ ಬಾರಿಸುವುದರೊಂದಿಗೆ ೧೦೨೦ ದಿನಗಳ ಬಳಿಕ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು, ಈ ಮೂಲಕ ದೀರ್ಘ ಅವಧಿಯ ಶತಕಗಳ ಕೊರತೆಯನ್ನು ನೀಗಿಸಿದ್ದಾರೆ.

ಗುರುವಾರ ಬಾರಿಸಿದ ಶತಕ ಅಂತಾರಾಷ್ಟ್ರಿಯ ಮಾದರಿಯಲ್ಲಿ ಅವರ ೭೧ನೇ ಶತಕವಾಗಿದೆ. ಅತಿ ಹೆಚ್ಚು ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಕೊಹ್ಲಿ ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಅವರೂ ೭೧ ಶತಕಗಳನ್ನು ಬಾರಿಸಿದ್ದಾರೆ. ಆದರೆ, ಅವರು ೬೬೮ ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದಾರೆ. ಕೊಹ್ಲಿ ೫೨೨ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಕೊಹ್ಲಿ ಈಗ ಭಾರತ ಪರ ಟಿ೨೦ ಮಾದರಿಯಲ್ಲಿ ಶತಕ ಬಾರಿಸಿದ ಹಿರಿಯ ಆಟಗಾರ. ಕೊಹ್ಲಿಗೆ ಗುರುವಾರ ೩೩ ವರ್ಷ ೩೦೭ ದಿನಗಳು. ಈ ಹಿಂದೆ ಸೂರ್ಯಕುಮಾರ್‌ ಯಾದವ್‌ ೩೧ ವರ್ಷ ೨೯೯ ದಿನಗಳು ಈ ಸಾಧನೆ ಮಾಡಿದ್ದರು.

ಏಷ್ಯಾ ಕಪ್‌ನಲ್ಲಿ ವಿರಾಟ್‌ ಕೊಹ್ಲಿ ನಾಲ್ಕನೇ ಶತಕ ಬಾರಿಸಿದ್ದಾರೆ. ಆದರೆ, ಟಿ೨೦ ಮಾದರಿಯಲ್ಲಿ ಶತಕ ಬಾರಿಸಿದ ಏಕೈಕ ಆಟಗಾರ. ಅಂತೆಯೇ ಟೂರ್ನಿಯೊಂದರಲ್ಲಿ ೩ ಬಾರಿ ಅರ್ಧ ಶತಕ ಅಥವಾ ಅದಕ್ಕಿಂತ ಹೆಚ್ಚು ರನ್ ಬಾರಿಸಿದ ಏಕೈಕ ಆಟಗಾರ ಎನಿಸಿಕೊಂಡರು.

ಇದನ್ನೂ ಓದಿ | Virat kohli | ಚೊಚ್ಚಲ ಟಿ20(ಐ) ಶತಕವನ್ನು ಪತ್ನಿ, ಪುತ್ರಿಗೆ ಅರ್ಪಿಸಿದ ವಿರಾಟ್‌ ಕೊಹ್ಲಿ

Exit mobile version