Site icon Vistara News

Asia Cup | ಏಷ್ಯಾ ಕಪ್‌ ಭದ್ರತೆಗೆ ದುಬೈ ಪೊಲೀಸರಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ASIA CUP

ದುಬೈ : ಮುಂಬರುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ (Asia Cup) ಯುಎಇನಲ್ಲಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದುಬೈ ಪೊಲೀಸರು ಕ್ರಿಕೆಟ್‌ ಸ್ಟೇಡಿಯಮ್‌ಗೆ ತೆರಳಿ ಭದ್ರತೆಯ ಬಗ್ಗೆ ಪರಿಶೀಲನೆ ನಡೆಸಿದರು. ಬಹುರಾಷ್ಟ್ರೀಯ ಟೂರ್ನಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಭದ್ರತೆಯನ್ನು ನೀಡಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಆಟಗಾರರು ಹಾಗೂ ಕ್ರಿಕೆಟ್‌ ಪ್ರೇಮಿಗಳ ಸುರಕ್ಷತೆಗಾಗಿ ದುಬೈ ಪೊಲೀಸರು ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. ಸಂವಹನ ಮತ್ತು ಸಂಪರ್ಕಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದೆ ಎಂದು ದುಬೈ ಇವೆಂಟ್‌ ಸೆಕ್ಯುರಿಟಿ ಕಮಿಟಿಯ ಬ್ರಿಗೇಡಿಯರ್‌ ರಶೀದ್‌ ಖಲಿಫಾ ಅಲ್‌ ಫಲಾಸಿ ಅವರು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಅವರು ನಾವು ಏಷ್ಯಾ ಕಪ್‌ ಅಯೋಜಿಸಲು ಸಂಪೂರ್ಣ ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಏಷ್ಯಾ ಕಪ್‌ ಟೂರ್ನಿ ಆಗಸ್ಟ್‌ ೨೭ರಂದು ಆರಂಭವಾಗಲಿದ್ದು, ಸೆಪ್ಟೆಂಬರ್‌ ೧೧ರವರೆಗೆ ಮುಂದುವರಿಯಲಿದೆ. ಸ್ಟೇಡಿಯಮ್‌ಗೆ ಹೋಗುವ ಮೊದಲು ಬ್ರಿಗೇಡಿಯರ್‌ ಖಲಿಫಾ ಅವರು, ದುಬೈ ಪೊಲೀಸರು ಇತ್ತೀಚೆಗೆ ಅಳವಡಿಸಿಕೊಂಡಿರುವ ಸುಧಾರಿತ ತಂತ್ರಜ್ಞಾನವನ್ನು ಪರಿಚಯ ಮಾಡಿದರು.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರೇಕ್ಷಕರಿಗೆ ಭದ್ರತೆಯ ಬಗ್ಗೆ ಅರಿವು ಮೂಡಿಸಲಾಗುವುದು. ಅಂತೆಯೇ ಮೈದಾನಕ್ಕೆ ತೆರಳುವ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿ ಹೇಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Asia Cup Cricket | ಏಷ್ಯಾ ಕಪ್‌ಗೆ ಆಯ್ಕೆಯಾದ ಆಟಗಾರರಿಗೆ ಶುರುವಾಗಿದೆ ಟೆನ್ಷನ್‌

Exit mobile version