ಬೆಂಗಳೂರು: ಪ್ರತಿಷ್ಠಿತ ದುಲೀಪ್ ಟ್ರೋಫಿಗೆ(Duleep Trophy 2023) ದಕ್ಷಿಣ ವಲಯ ತಂಡ(South Zone team) ಪ್ರಕಟಗೊಂಡಿದೆ. ತಂಡದಲ್ಲಿ ನಾಲ್ವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಗಾಯದಿಂದ ಚೇತರಿಕೆ ಕಂಡಿರುವ ಹುನುಮ ವಿಹಾರಿ (Hanuma Vihari) ತಂಡದ ನಾಯಕತ್ವ ವಹಿಸಲಿದ್ದಾರೆ. ಮಯಾಂಕ್ ಅಗರ್ವಾಲ್(Mayank Agarwal) ಉಪನಾಯಕರಾಗಿದ್ದಾರೆ. ಈ ಟೂರ್ನಿ ಇದೇ ಜೂನ್ 28ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ರಣಜಿ ಟ್ರೋಫಿ 2022-23ರ ಕ್ವಾರ್ಟರ್‌ಫೈನಲ್ ಪಂದ್ಯದ ವೇಳೆ ಗಾಯಕ್ಕೀಡಾದರೂ ಪಂದ್ಯ ಆಡಿದ್ದ ಹನುಮ ವಿಹಾರಿ ಆ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಅವರು ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಗೋವಾದಲ್ಲಿ ಮಂಗಳವಾರ ಜೂನ್ 13ರಂದು ನಡೆದ ಸಭೆಯಲ್ಲಿ ದಕ್ಷಿಣ ವಲಯ ಅಸೋಸಿಯೇಷನ್‌ಗಳು ದುಲೀಪ್ ಟ್ರೋಫಿ ಸರಣಿಗಾಗಿ 15 ಜನರ ತಂಡವನ್ನು ಆಯ್ಕೆ ಮಾಡಿವೆ.
ಲಂಡನ್‌ನಲ್ಲಿ ಮುಕ್ತಾಯ ಕಂಡ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆಡಿದ್ದ ಶ್ರೀಕರ್ ಭರತ್ ಕೂಡ ಸ್ಥಾನ ಪಡೆದಿದ್ದಾರೆ. ಇನ್ನು ತಮಿಳುನಾಡು ರಾಜ್ಯದಿಂದ ವಾಷಿಂಗ್ಟನ್ ಸುಂದರ್, ಸಾಯಿ ಸುದರ್ಶನ್, ಪ್ರದೋಶ್ ರಂಜನ್ ಪಾಲ್ ಮತ್ತು ಸಾಯಿ ಕಿಶೋರ್ ಆಯ್ಕೆಯಾಗಿದ್ದಾರೆ. ಕರ್ನಾಟಕ ತಂಡದಿಂದ ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್ ಮತ್ತು ವೇಗಿ ವಿದ್ವತ್ ಕಾವೇರಪ್ಪ ಹಾಗೂ ವೈಶಾಕ್ ವಿಜಯ್ ಕುಮಾರ್ ಸ್ಥಾನ ಪಡೆದಿದ್ದಾರೆ.
ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ಗಮನಸೆಳೆದಿದ್ದ ತಿಲಕ್ ವರ್ಮಾ ಕೂಡ ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ IND vs WI: ಭಾರತ-ವಿಂಡೀಸ್ ಕ್ರಿಕೆಟ್ ಸರಣಿ ಉಚಿತ ಪ್ರಸಾರ; ಎಲ್ಲಿ ವೀಕ್ಷಣೆ?
ದಕ್ಷಿಣ ವಲಯ ತಂಡ
ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪ ನಾಯಕ), ಶ್ರೀಕರ್ ಭರತ್ (ವಿಕೆಟ್ ಕೀಪರ್), ರಿಕಿ ಭುಯಿ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ವಾಷಿಂಗ್ಟನ್ ಸುಂದರ್, ರವಿಕುಮಾರ್ ಸಮರ್ಥ್, ತಿಲಕ್ ವರ್ಮ, ಸಚಿನ್ ಬೇಬಿ, ಸಾಯಿ ಕಿಶೋರ್, ವಿದ್ವತ್ ಕಾವೇರಪ್ಪ, ವೈಶಾಕ್ ವಿಜಯ್‌ಕುಮಾರ್, ಪ್ರದೋಶ್ ರಂಜನ್ ಪಾಲ್, ಕೆವಿ ಶಸಿಕಾಂತ್, ದರ್ಶನ್ ಮಿಸಲ್.