ಮುಂಬಯಿ: ಈ ಬಾರಿಯ ದುಲೀಪ್ ಟ್ರೋಫಿ(Duleep Trophy 2024) ಪಂದ್ಯಾವಳಿ ಅತ್ಯಂತ ವಿಶೇಷವಾಗಿರಲಿದೆ. ಹೌದು, ಟೀಮ್ ಇಂಡಿಯಾದ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೆ.ಎಲ್ ರಾಹುಲ್, ರವೀಂದ್ರ ಜಡೇಜಾ ಸೇರಿ ಹಲವು ಆಟಗಾರರು ಈ ಬಾರಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 5ರಿಂದ 22ರ ತನಕ ಟೂರ್ನಿ ನಡೆಯಲಿದೆ.
ಏನಿದು ದುಲೀಪ್ ಟ್ರೋಫಿ
ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿಯಾಗಿದೆ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. 1961-62 ರಲ್ಲಿ ಮೊದಲ ಬಾರಿಗೆ ಈ ಟೂರ್ನಿಯನ್ನು ಆರಂಭಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.
ರೌಂಡ್-ರಾಬಿನ್ ಮಾದರಿ
ಈ ವರ್ಷ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯ ಪಂದ್ಯಾವಳಿಯನ್ನು ನಡೆಸಲಾಗುತ್ತದೆ. ಇಂಡಿಯಾ ‘ಎ’, ಇಂಡಿಯಾ ‘ಬಿ’, ಇಂಡಿಯಾ ‘ಸಿ’ ಹಾಗೂ ಇಂಡಿಯಾ ‘ಡಿ’ ತಂಡಗಳೊಂದಿಗೆ ಆಡಲಾಗುತ್ತದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ತಂಡಗಳನ್ನು ಆಯ್ಕೆ ಮಾಡುತ್ತದೆ.
ಇದನ್ನೂ ಓದಿ Duleep Trophy: 14 ವರ್ಷಗಳ ಬಳಿಕ ದುಲೀಪ್ ಟ್ರೋಫಿ ಆಡಲಿದ್ದಾರೆ ವಿರಾಟ್ ಕೊಹ್ಲಿ?
ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ವಿರಾಮದ ವೇಳೆ ದೇಶೀಯ ಕ್ರಿಕೆಟ್ನಲ್ಲಿ ಆಡಬೇಕೆಂಬುದು ಬಿಸಿಸಿಐ ನಿಲುವಾಗಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸ್ಥಿರ ಫಾರ್ಮ್ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲ ಆಟಗಾರರಿಗೂ ದೇಶೀಯ ಟೂರ್ನಿಯಲ್ಲಿ ಪೂರ್ತಿ ಸರಣಿ ಆಡದೇ ಹೋದರೂ ಕೆಲವು ಪಂದ್ಯಗಳಲ್ಲಾದರೂ ಆಡಬೇಕು ಎಂದು ಬಿಸಿಸಿಐ ಸೂಚನೆ ನೀಡಿತ್ತು. ಹೀಗಾಗಿ ಈ ಬಾರಿ ಸೀನಿಯರ್ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಟೆಸ್ಟ್ ತಂಡದ ಸಂಭಾವ್ಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ರಿಷಭ್ ಪಂತ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮೊದಲಾದವರೆಲ್ಲ ದುಲೀಪ್ ಟ್ರೋಫಿಯ ಕೆಲವು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಜಸ್‌ಪ್ರೀತ್ ಬುಮ್ರಾ, ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಗಾಯಾಳಾಗಿರುವ ವೇಗಿ ಮೊಹಮ್ಮದ್ ಶಮಿ ಅವರಿಗೆ ಬಿಸಿಸಿಐ ರಿಯಾಯಿತಿ ನೀಡಿದೆ ಎನ್ನಲಾಗಿದೆ.
ದುಲೀಪ್ ಟ್ರೋಫಿ ವೇಳಾಪಟ್ಟಿ
ಸೆಪ್ಟೆಂಬರ್ 5-8: ಇಂಡಿಯಾ ಎ-ಇಂಡಿಯಾ ಬಿ-ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ(ಸ್ಥಳ ಬದಲಾಗುವ ಸಾಧ್ಯತೆ ಇದೆ)
ಸೆಪ್ಟೆಂಬರ್ 5-8: ಇಂಡಿಯಾ ಸಿ- ಇಂಡಿಯಾ ಡಿ-ಅನಂತಪುರದ ಎಸಿಎ ಎಡಿಸಿಎ ಗ್ರೌಂಡ್(ಸ್ಥಳ ಬದಲಾಗುವ ಸಾಧ್ಯತೆ ಇದೆ)
ಸೆಪ್ಟೆಂಬರ್ 12-15: ಇಂಡಿಯಾ ಎ- ಇಂಡಿಯಾ ಡಿ- ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ
ಸೆಪ್ಟೆಂಬರ್ 12-15: ಇಂಡಿಯಾ ಬಿ- ಇಂಡಿಯಾ ಸಿ-ಎಸಿಎ ಎಡಿಸಿಎ ಗ್ರೌಂಡ್, ಅನಂತಪುರ
ಸೆಪ್ಟೆಂಬರ್ 19-22: ಇಂಡಿಯಾ ಎ-ಇಂಡಿಯಾ ಸಿ- ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ
ಸೆಪ್ಟೆಂಬರ್ 19-22: ಇಂಡಿಯಾ ಬಿ-ಇಂಡಿಯಾ ಡಿ- ಎಸಿಎ ಎಡಿಸಿಎ ಗ್ರೌಂಡ್, ಅನಂತಪುರ