Site icon Vistara News

Duleep Trophy: 14 ವರ್ಷಗಳ ಬಳಿಕ ದುಲೀಪ್‌ ಟ್ರೋಫಿ ಆಡಲಿದ್ದಾರೆ ವಿರಾಟ್​ ಕೊಹ್ಲಿ?

Duleep Trophy

Duleep Trophy: Will Virat Kohli play Duleep Trophy after 14 years?

ಮುಂಬಯಿ: ಮುಂದಿನ ತಿಂಗಳು ಆರಂಭಗೊಳ್ಳಲಿರುವ ದೇಶೀಯ ಕ್ರಿಕೆಟ್​ ಟೂರ್ನಿಯಾದ ದುಲೀಪ್‌ ಟ್ರೋಫಿಯಲ್ಲಿ(Duleep Trophy) ಟೀಮ್‌ ಇಂಡಿಯಾದ ಬಹುತೇಕ ಟೆಸ್ಟ್‌ ಆಟಗಾರರು ಆಡಲಿದ್ದಾರೆ ಎಂದು ಈಗಾಗಲೇ ವರದಿಯಾಗಿತ್ತು. ಇದೀಗ ನಾಯಕ ರೋಹಿತ್​ ಶರ್ಮ(Rohit Sharma) ಮತ್ತು ವಿರಾಟ್​ ಕೊಹ್ಲಿ(Virat Kohli) ಕೂಡ ಆಡಲಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್​ ಆಟಗಾರರು ವಿರಾಮದ ವೇಳೆ ದೇಶೀಯ ಕ್ರಿಕೆಟ್​ನಲ್ಲಿ ಆಡಬೇಕೆಂಬುದು ಬಿಸಿಸಿಐ ನಿಲುವಾಗಿದ್ದು, ಇದೇ ಕಾರಣದಿಂದ ಸೀನಿಯರ್​ ಆಟಗಾರರು ಕೂಡ ದೇಶೀಯ ಕ್ರಿಕೆಟ್​ ಆಡಲು ಸಜ್ಜಾಗಿದ್ದಾರೆ. ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ಪ್ರೀತ್‌ ಬುಮ್ರಾ, ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌, ಗಾಯಾಳಾಗಿರುವ ವೇಗಿ ಮೊಹಮ್ಮದ್‌ ಶಮಿ ಅವರಿಗೆ ಬಿಸಿಸಿಐ ರಿಯಾಯಿತಿ ನೀಡಿದೆ.

ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಸ್ಥಿರ ಫಾರ್ಮ್​ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಸಿಸಿಐ ಈಗಾಗಲೇ ಎಲ್ಲ ಆಟಗಾರರಿಗೂ ದೇಶೀಯ ಟೂರ್ನಿಯಲ್ಲಿ ಪೂರ್ತಿ ಸರಣಿ ಆಡದೇ ಹೋದರೂ ಕೆಲವು ಪಂದ್ಯಗಳಲ್ಲಾದರೂ ಆಡಬೇಕು ಎಂದು ಸೂಚನೆ ನೀಡಿತ್ತು. ಕೊಹ್ಲಿ ಕಳೆದ ಲಂಕಾ ಏಕದಿನ ಸರಣಿಯಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್​ ವೈಫಲ್ಯ ಕಂಡಿದ್ದರು. ಟೆಸ್ಟ್‌ ತಂಡದ ಸಂಭಾವ್ಯ ಆಟಗಾರರಾದ ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜ, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌ ಮೊದಲಾದವರೆಲ್ಲ ದುಲೀಪ್‌ ಟ್ರೋಫಿಯ ಕೆಲವು ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿ ಸೆಪ್ಟೆಂಬರ್​ 19ರಿಂದ ಆರಂಭಗೊಳ್ಳಲಿದೆ. ದುಲೀಪ್‌ ಟ್ರೋಫಿ ಸೆಪ್ಟೆಂಬರ್ 5ರಿಂದ ಶುರುವಾಗಲಿದೆ. ಹೀಗಾಗಿ ಭಾರತ ತಂಡದ ಹಿರಿಯ ಆಟಗಾರರಿಗೆ ಕನಿಷ್ಠ 2 ಪಂದ್ಯಗಳನ್ನು ಆಡುವ ಅವಕಾಶ ಸಿಗಬಹುದು.

ಇದನ್ನೂ ಓದಿ Maharaja Trophy 2024: ಮಹಾರಾಜ ಟಿ20 ಕ್ರಿಕೆಟ್​ ಟೂರ್ನಿ ಆರಂಭಕ್ಕೆ ಒಂದು ದಿನ ಬಾಕಿ; ತಂಡಗಳ ವಿವರ ಹೀಗಿದೆ

14 ವರ್ಷದ ಹಿಂದಿನ ಕೊಹ್ಲಿಯ ಟ್ವೀಟ್ ವೈರಲ್​​


ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಭಾರತ ತಂಡದ ಹಿರಿಯ ಆಟಗಾರರು ಆಡುತ್ತಾರೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ವಿರಾಟ್​ ಕೊಹ್ಲಿ ಅವರು 14 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್​ ಒಂದು ಈಗ ವೈರಲ್​ ಆಗಿದೆ. ಹೌದು, ವಿರಾಟ್​ ಕೊಹ್ಲಿ ಕೊನೆಯ ಬಾರಿಗೆ ದುಲೀಪ್​ ಟ್ರೋಫಿ ಆಡಿದ್ದು 2010ರಲ್ಲಿ. ಆಗ ಕೊಹ್ಲಿ ದುಲೀಪ್​ ಟ್ರೋಫಿ ಆಡುತ್ತಿರುವ ನನಗೆ ಶುಭ ಹಾರೈಸಿ ಎಂದು ಬರೆದುಕೊಂಡಿದ್ದರು. ಈ ಟ್ವಿಟ್​ ಇದೀಗ ವೈರಲ್​ ಆಗಿದೆ. ಇದಕ್ಕೆ ಕಾರಣ ಕೊಹ್ಲಿ 14 ವರ್ಷಗಳ ಬಳಿಕ ಮತ್ತೆ ದುಲೀಪ್​ ಟ್ರೋಫಿ ಆಡಲು ಸಿದ್ಧವಾಗಿರುವುದು.

ರೋಹಿತ್​ ಶರ್ಮ ಅವರು ಕೊನೆಯ ಬಾರಿಗೆ ದುಲೀಪ್​ ಟ್ರೋಫಿ ಆಡಿದ್ದು 2016ರಲ್ಲಿ. ಅವರು ಕೂಡ ಈ ಬಾರಿ ದುಲೀಪ್​ ಟ್ರೋಫಿ ಆಡಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ರೋಹಿತ್​, “ದೇಶೀಯ ಕ್ರಿಕೆಟ್ ಆಡುವುದು ಬಹಳ ಮುಖ್ಯ. ನಾವು ಮುಖ್ಯವಾಗಿ ಟೆಸ್ಟ್ ಮತ್ತು ಏಕದಿನ ಸರಣಿಗೆ ದೇಶೀಯ ಕ್ರಿಕೆಟ್​ ಪ್ರದರ್ಶನ ನೋಡಿ ಆಟಗಾರರನ್ನು ಆಯ್ಕೆ ಮಾಡಬೇಕಾಗಿದೆ. ನಮ್ಮ ದೇಶೀಯ ಕ್ರಿಕೆಟ್, ಭಾರತೀಯ ಕ್ರಿಕೇಟ್‌ನ ಬೆನ್ನೆಲುಬು” ಎಂದು ಹೇಳಿದ್ದರು.

Exit mobile version