ಲಖನೌ: ಭಾರತದಲ್ಲಿ ಕ್ರಿಕೆಟ್ “ಧರ್ಮ”ವೂ ಎನಿಸಿದೆ ಹಾಗೂ ಅದಕ್ಕೊಬ್ಬ “ದೇವರು” ಕೂಡ ಇದ್ದಾರೆ. ಅಷ್ಟರಮಟ್ಟಿಗೆ ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ. ಆದರೆ, ಏಷ್ಯಾ ಕಪ್ (Asia Cup) ಹಿನ್ನೆಲೆಯಲ್ಲಿ ಹೀಗೆ ಕ್ರಿಕೆಟ್ ಅಭಿಮಾನವನ್ನು ಹೊತ್ತುಕೊಂಡು, ದುಬೈನಲ್ಲಿ ಆಗಸ್ಟ್ ೨೮ರಂದು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಿದ ಉತ್ತರ ಪ್ರದೇಶದ ವ್ಯಕ್ತಿಗೆ ಈಗ ಸಂಕಷ್ಟ ಎದುರಾಗಿದೆ.
ಉತ್ತರ ಪ್ರದೇಶದ ರಾಯ್‌ಬರೇಲಿಯ ಸಂಯಮ್ ಜೈಸ್ವಾಲ್, ಭಾರತ ತಂಡದ ಅಪ್ಪಟ ಅಭಿಮಾನಿಯಾಗಿದ್ದಾರೆ. ಆದರೆ, ಅವರು ದುಬೈ ಸ್ಟೇಡಿಯಂಗೆ ತೆರಳಿದಾಗ ಭಾರತ ತಂಡದ ಜರ್ಸಿ ಸಿಕ್ಕಿಲ್ಲ. ಆದರೆ, ಪಾಕಿಸ್ತಾನ ತಂಡದ ಜರ್ಸಿ ಸಿಕ್ಕ ಕಾರಣ ಅದನ್ನು ಖರೀದಿಸಿದ್ದಾರೆ. ಇದೇ ಇವರಿಗೆ ಸಂಕಷ್ಟ ತಂದಿದೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪಾಕಿಸ್ತಾನದ ಜರ್ಸಿ ತೊಟ್ಟು, ಪಾಕ್ ತಂಡಕ್ಕೆ ಬೆಂಬಲಿಸಿದ್ದಾನೆ ಎಂಬ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿದೆ.
ಸುದ್ದಿ ವೈರಲ್ ಆಗುತ್ತಲೇ ರಾಯ್‌ಬರೇಲಿಯಲ್ಲಿರುವ ಸಂಯಮ್ ಜೈಸ್ವಾಲ್ ಕುಟುಂಬಕ್ಕೆ ಬೆದರಿಕೆ ಒಡ್ಡಲಾಗಿದೆ. ಅಲ್ಲದೆ, ಟ್ವಿಟರ್‌ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿ ಈತನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಲಾಗಿದೆ. ಕೊನೆಗೆ ಬೆದರಿಕೆ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜೈಸ್ವಾಲ್ ಸ್ಪಷ್ಟನೆ ನೀಡಿದ್ದಾರೆ.
“ನಾನು ಭಾರತ ತಂಡದ ಅಪ್ಪಟ ಅಭಿಮಾನಿ. ಅದಕ್ಕಾಗಿಯೇ ದುಬೈಗೆ ಹೋದೆ. ಸ್ಟೇಡಿಯಂನಲ್ಲಿ ಭಾರತದ ಜೆರ್ಸಿಗಳು ಖಾಲಿಯಾದ ಕಾರಣ ಪಾಕ್ ಜೆರ್ಸಿ ಖರೀದಿಸಿದೆ. ಆದರೆ, ಇದು ಇಷ್ಟೊಂದು ಪರಿಣಾಮ ಬೀರುತ್ತದೆ ಎಂಬುದಾಗಿ ಭಾವಿಸಿರಲಿಲ್ಲ” ಎಂದಿದ್ದಾರೆ. ಹಾಗೆಯೇ, ಪ್ರಮಾದದ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಸದ್ಯ, ಸುರಕ್ಷಿತವಾಗಿ ಸಂಯಮ್ ಮನೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ | IND vs PAK- ಪಾಕ್ ವೇಗಿಗೆ ಹಸ್ತಾಕ್ಷರವುಳ್ಳ ಜರ್ಸಿ ಗಿಫ್ಟ್ ಕೊಟ್ಟ ವಿರಾಟ್ ಕೊಹ್ಲಿ