Site icon Vistara News

ಕುತೂಹಲ ಕೆರಳಿಸಿದ ಕುಸ್ತಿ ಒಕ್ಕೂಟದ ಚುನಾವಣೆ; ಕ್ರೀಡಾ ಸಚಿವರನ್ನು ಭೇಟಿಯಾದ ಕುಸ್ತಿಪಟುಗಳು

wrestlers meet anurag thakur

ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್​ನ ಚುನಾವಣೆ ಶನಿವಾರ(ಆಗಸ್ಟ್​ 12) ನಡೆಯಲಿದೆ. ಈ ಚುನಾವಣೆ(WFI Elections) ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಲೈಂಗಿಕ ಕಿರುಕುಳ ಆರೋಪ ಹೊತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿರುವ ಬ್ರಿಜ್‌ಭೂಷಣ್‌ ಶರಣ್​ ಸಿಂಗ್(Brijbhushan Sharan Singh)​ ಅವರು ಹೇಗಾದರೂ ಮಾಡಿ ತನ್ನ ಆಪ್ತ ಸಂಜಯ್‌ ಸಿಂಗ್‌(Sanjay Singh) ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವಂತೆ ಸುಮಾರು ಒಂದು ತಿಂಗಳಿನಿಂದ ಕಸರತ್ತು ನಡೆಸುತ್ತಿದ್ದಾರೆ. ಆದರೆ ಬ್ರಿಜ್​ ಭೂಷಣ್​ ವಿರುದ್ಧ ತೊಡೆ ತಟ್ಟಿ ಪ್ರತಿಭಟನೆ ಮಾಡಿದ್ದ ವಿನೇಶ್‌ ಫೋಗಟ್‌(vinesh phogat), ಬಜರಂಗ್ ಪೂನಿಯಾ(bajrang punia), ಸಾಕ್ಷಿ ಮಲಿಕ್‌(sakshi malik) ಅವರು ಸಂಜಯ್‌ ಸಿಂಗ್‌ ಆಯ್ಕೆಯಾಗದಂತೆ ತಡೆಯಲು ಕೇಂದ್ರದ ಮೊರೆ ಹೋಗಿರುವುದಾಗಿ ತಿಳಿದುಬಂದಿದೆ.

ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ಮಧ್ಯೆ ಸ್ಪರ್ಧೆ 

ಅಧ್ಯಕ್ಷ ಸ್ಥಾನಕ್ಕಾಗಿ ಸದ್ಯ ಸಂಜಯ್‌ ಸಿಂಗ್‌ ಹಾಗೂ ಬ್ರಿಜ್‌ ವಿರುದ್ಧ ಪ್ರಕರಣದಲ್ಲಿ ಸಾಕ್ಷಿಯಾಗಿರುವ, ಮಾಜಿ ಕುಸ್ತಿಪಟು ಅನಿತಾ ಶೆರೋನ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಚುನಾನವಣೆಗೆ ಎರಡು ದಿನ ಬಾಕಿ ಇರುವಾಗ ಅಂದರೆ ಗುರುವಾರ ರಾತ್ರಿ ವಿನೇಶ್‌ ಹಾಗೂ ತಂಡ ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಬ್ರಿಜ್‌ ಆಪ್ತ ಸಂಜಯ್‌ ಸ್ಪರ್ಧಿಸಬಾರದು. ಬ್ರಿಜ್​ ಭೂಷಣ್​ ಅವರೊಂದಿಗೆ ಹಣಕಾಸಿನ ವ್ಯವಹಾರದಲ್ಲೂ ತೊಡಗಿದ್ದಾರೆ. ಹೀಗಾಗಿ ಸಂಜಯ್​ ಆಯ್ಕೆಯಾದರೆ ಬ್ರಿಜ್‌ಭೂಷಣ್‌ಗೇ ಅಧಿಕಾರ ಸಿಕ್ಕಂತ್ತಾಗುತ್ತದೆ. ಈ ಮೂಲಕ ಅವರು ಮತ್ತೆ ನಮ್ಮ ಮೇಲೆ ತೆರೆಯ ಹಿಂದೆ ನಿಂತು ಸೇಡು ತೀರಿಸುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಅಪ್ರಾಪ್ತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಬ್ರಿಜ್‌ಭೂಷಣ್​ ಕುಟುಂಬಸ್ಥರು ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಮತ್ತು ಯಾವುದೇ ಕಾರಣಕ್ಕೂ ಅವರ ಕುಟುಂಬ ಸದಸ್ಯರಿಗೆ ಮತದಾನದ ಅವಕಾಶ ನೀಡಬಾರದೆಂದು ಕುಸ್ತಿಪಟುಗಳು ಕೇಂದ್ರಕ್ಕೆ ಷರತ್ತು ವಿಧಿಸಿ ಪ್ರತಿಭಟನೆಯಿಂದ ಹಿಂದೆ ಸರಿದ್ದಿದ್ದರು.

ಇದನ್ನೂ ಓದಿ Brij Bhushan: ಜಾಮೀನು ಪಡೆದ ಬ್ರಿಜ್‌ಭೂಷಣ್‌; ದೇಶ ತೊರೆಯದಂತೆ ಸೂಚನೆ

ಚುನಾವಣೆಗೆ ಹಲವು ಬಾರಿ ಸಮಸ್ಯೆ

ಆಗಸ್ಟ್​ 12ರಂದು ಈ ಚುನಾವಣೆ(Wrestling Federation of India Election) ನಡೆಯಲಿದ್ದು ಬಣಗಳಾಗಿ ಇಬ್ಭಾಗವಾಗಿರುವ ಮಹಾರಾಷ್ಟ್ರ ಸಂಸ್ಥೆಗೆ ಚುನಾವಣೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ. ಆರಂಭದಲ್ಲಿ ಮಧ್ಯಾಂತರ ಸಮಿತಿ ಜುಲೈ 6ಕ್ಕೆ ಚುನಾವಣೆ ನಿಗದಿ ಮಾಡಿತ್ತು. ಆದರೆ ಅಮಾನ್ಯಗೊಂಡ ಮಹಾರಾಷ್ಟ್ರ, ಹರಿಯಾಣ, ತೆಲಂಗಾಣ, ರಾಜಸ್ಥಾನ, ಹಿಮಾಚಲ ಪ್ರದೇಶಗಳು ತಮಗೂ ಅವಕಾಶ ಕೊಡಬೇಕೆಂದು ಆಗ್ರಹಿಸಿದ್ದ ಕಾರಣ ಈ ದಿನಾಂಕವನ್ನು ಜುಲೈ 11ಕ್ಕೆ ಮುಂದೂಡಲಾಗಿತ್ತು. ಇನ್ನೇನು ಚುನಾವಣೆ ನಡೆಯಬೇಕು ಎನ್ನುವಾಗ ಅಸ್ಸಾಂ ಸಂಸ್ಥೆ ತನಗೆ ಮತದಾನಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿತ್ತು. ಹೀಗಾಗಿ ಗುವಾಹಾಟಿ ಉಚ್ಚ ನ್ಯಾಯಾಲಯ ಚುನಾವಣೆಗೆ ತಡೆ ನೀಡಿತು. ಹೀಗೆ ಹಲವು ಬಾರಿ ದಿನಾಂಕ ನಿಗದಿಯಾಗಿ ಮುಂದೂಡಲ್ಪಟ್ಟಿತ್ತು.

48 ಪ್ರತಿನಿಧಿಗಳು ಭಾಗಿ

ಪ್ರತಿ ಬಾರಿ ಒಂದಲ್ಲ ಒಂದು ಸಮಸ್ಯೆಯಿಂದ ಮುಂದೂಡಿಕೆಯಾಗುತ್ತಿದ್ದ ಈ ಚುನಾವಣೆಯ ವಿಚಾರದಲ್ಲಿ ಅಂತಿಮವಾಗಿ ಸ್ವತಃ ಸರ್ವೋಚ್ಚ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಎಲ್ಲ ತಡೆಗಳನ್ನು ನಿವಾರಿಸಿ, ಚುನಾವಣೆ ನಡೆಸಬೇಕೆಂದು ಆದೇಶಿಸಿದೆ. ಚುನಾವಣೆಯಲ್ಲಿ 24 ರಾಜ್ಯಸಂಸ್ಥೆಗಳ 48 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಆಗಸ್ಟ್​ 1ರಂದು ನಾಮಪತ್ರಗಳನ್ನು ಸಲ್ಲಿಸಲಾಗುತ್ತದೆ. ಒಂದು ವೇಳೆ ಅವಿರೋಧವಾಗಿ ಆಯ್ಕೆಯಾಗುವ ಪರಿಸ್ಥಿತಿ ಇಲ್ಲವಾದರೆ ಆಗಸ್ಟ್​ 12ಕ್ಕೆ ಮತದಾನ ನಡೆಸಿ ಫ‌ಲಿತಾಂಶ ಪ್ರಕಟಿಸಲಾಗುತ್ತದೆ.

Exit mobile version