ಲಂಡನ್: ಹುಲ್ಲಿನಂಗಣದ ಪ್ರತಿಷ್ಠಿತ ಗ್ರ್ಯಾನ್ ಸ್ಲಾಮ್ ಟೂರ್ನಿ ವಿಂಬಲ್ಡನ್‌ನ ಮಹಿಳೆಯರ ಸಿಂಗಲ್ಸ್ ಟ್ರೋಫಿ ಹೊಸ ಟೆನಿಸ್ ತಾರೆಯ ಪಾಲಾಗಿದೆ. ಅವರೇ ೨೩ ವರ್ಷದ ಎಲೆನಾ ರಿಬಕಿನಾ.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ೨ ಆಟಗಾರ್ತಿ ಟ್ಯುನಿಷಿಯಾದ ಒನ್ಸ್ ಜೇಬರ್ ಅವರನ್ನು ೩-೬, ೬-೨, ೬-೨ ಸೆಟ್‌ಗಳಿಂದ ಮಣಿಸಿದ ವಿಶ್ವದ ೨೩ನೇ ರ್ಯಾಂಕ್‌ನ ಆಟಗಾರ್ತಿ ಎಲೆನಾ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಮೊದಲ ಸೆಟ್‌ನಲ್ಲಿ ಮುನ್ನಡೆ ಪಡೆದುಕೊಂಡ ಒನ್ಸ್ ಜೇಬರ್, ನಂತರದ ಎರಡೂ ಸೆಟ್‌ಗಳಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ರನ್ನರ್ ಅಪ್ ಪ್ರಶಸ್ತಿಗೆ ಸೀಮಿತಗೊಂಡರು. ಅವರು ಪ್ರಶಸ್ತಿ ಗೆದ್ದಿದ್ದರೆ ದಕ್ಷಿಣ ಆಫ್ರಿಕಾ ಖಂಡದ ಟೆನಿಸೆ ತಾರೆಯೊಬ್ಬರು ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ತಮ್ಮದಾಗಿಸಿಕೊಳ್ಳುತ್ತಿದ್ದರು. ಆದರೆ, ಕಜಕಸ್ತಾನದ ಯುವ ಪ್ರತಿಭೆ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ.
ಈ ಇಬ್ಬರೂ ಆಟಗಾರ್ತಿಯರು ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಫೈನಲ್‌ಗೇರಿದ್ದರು.೧೯೬೨ರ ಬಳಿಕ ಇದೇ ಮೊದಲ ಬಾರಿ ಯಾವುದೇ ಗ್ರ್ಯಾನ್ ಸ್ಲಾಮ್ ಟ್ರೋಫಿ ಗೆಲ್ಲದ ಅಟಗಾರ್ತಿಯರಿಬ್ಬರು ಫೈನಲ್‌ಗೇರಿದ್ದರು.
೧೧ ವರ್ಷಗಳ ಬಳಿಕ ಯುವ ಆಟಗಾರ್ತಿ
೨೩ ವರ್ಷದ ಎಲೆನಾ ೧೧ ವರ್ಷಗಳ ಬಳಿಕ ವಿಂಬಲ್ಡನ್ ಚಾಂಪಿನ್ ಪಟ್ಟ ಗೆದ್ದ ಯುವ ಆಟಗಾರ್ತಿ ಎನಿಸಿಕೊಂಡಿದ್ದಾರೆ. ೨೦೧೧ರಲ್ಲಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ (೨೧ ವರ್ಷ) ಚಾಂಪಿಯನ್ ಪಟ್ಟ ಅಲಂಕರಿಸಿದ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು.
ಇದನ್ನೂ ಓದಿ: ಟೆನಿಸ್‌ನ Bad Boy ಕಿರ್ಗಿಯೋಸ್ ಗರ್ಲ್ ಫ್ರೆಂಡ್ ಯಾರು?