ಅಸ್ತಾನಾ: ಎಲೊರ್ಡಾ ಕಪ್ ಬಾಕ್ಸಿಂಗ್(Elorda Cup 2023) ಟೂರ್ನಿಯಲ್ಲಿ ಭಾರತದ ಬಾಕ್ಸರ್‌ಗಳು ಅಮೋಘ ಸಾಧನೆ ತೋರಿದ್ದಾರೆ. ಶನಿವಾರ ಎರಡು ಕಂಚು ಗೆಲ್ಲುವ ಮೂಲಕ ಹೋರಾಟವನ್ನು ಅಂತ್ಯಗೊಳಿಸಿದ ಭಾರತ ಟೂರ್ನಿಯಲ್ಲಿ ಒಟ್ಟು 5 ಕಂಚಿನ ಪದಕ ಸಾಧನೆ ಮಾಡಿದೆ.
ಶನಿವಾರ ರಾತ್ರಿ ನಡೆದ 60 ಕೆಜಿ ವಿಭಾಗದ ಸೆಮಿಫೈನಲ್‌ನ ಸ್ಪರ್ಧೆಯಲ್ಲಿ ಭಾರತದ ವಿಜಯಕುಮಾರ್(Vijay Kumar) 1-4ರಿಂದ ಆತಿಥೇಯ ದೇಶದ ಬೆಕನೂರ್ ಒಝನೋವ್ ಎದುರು ಸೋಲು ಕಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು. 81 ಕೆಜಿ ವಿಭಾಗದ ಮತ್ತೊಂದು ಸೆಮಿಫೈನಲ್ ಹೋರಾಟದಲ್ಲಿ ಸುಷ್ಮಾ(Sushma) ಅವರು ಕಜಕಿಸ್ತಾನದ ಫರೀಜಾ ಶೋಲ್ಟೆ ಎದುರು 0-5ರಿಂದ ಹೀನಾಯ ಸೋಲು ಕಂಡರು. ಸೆಮಿಫೈನಲ್ ಸಾಧನೆಗಾಗಿ ಅವರಿಗೆ ಕಂಚು ಲಭಿಸಿತು. ಇದಕ್ಕೂ ಮೊದಲು ನಡೆದಿದ್ದ ಸ್ಪರ್ಧೆಯಲ್ಲಿ ಕೀಷಮ್ ಸಂಜಿತ್ ಸಿಂಗ್(Keisham Sanjit Singh) (48 ಕೆಜಿ), ನೀಮಾ(Neema) (63 ಕೆಜಿ) ಮತ್ತು ಸುಮಿತ್(Sumit) (86 ಕೆಜಿ) ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಒಟ್ಟಾರೆಯಾಗಿ ಭಾರತ ಇಲ್ಲಿ 5 ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಮೇರಿ ಕೋಮ್ಗೆ ಇಂಗ್ಲೆಂಡ್ನ ಅತ್ಯುನ್ನತ ಪ್ರಶಸ್ತಿ
ಕೆಲ ದಿನಗಳ ಹಿಂದಷ್ಟೇ ಭಾರತದ ಕ್ರೀಡಾ ಕ್ಷೇತ್ರದ ದಂತಕಥೆ ಮತ್ತು ಮಹಿಳಾ ಬಾಕ್ಸಿಂಗ್ಸ್ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಪದಕ ತಂದು ಕೊಟ್ಟ ಮೇರಿ ಕೋಮ್ (Mary Kom ) ಅವರಿಗೆ ಆಗ್ನೇಯ ಇಂಗ್ಲೆಂಡ್ನ ವಿಂಡ್ಸರ್ನಲ್ಲಿ ಯುಕೆ-ಇಂಡಿಯಾ ಪ್ರಶಸ್ತಿ ಸಮಾರಂಭದಲ್ಲಿ ಗ್ಲೋಬಲ್ ಇಂಡಿಯನ್ ಐಕಾನ್ ಆಫ್ ದಿ ಇಯರ್ (Global Indian Icon of the Year) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೂನ್ 29 ರಂದು ರಾತ್ರಿ ನಡೆದ ಸಮಾರಂಭದಲ್ಲಿ ಮೇರಿ ಕೋಮ್ ಅವರು ಬ್ರಿಟನ್ನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು.
ಪ್ರಶಸ್ತಿ ಬಳಿಕ ಮಾತನಾಡಿದ್ದ ಮೇರಿ ಅವರು, “ನಾನು 20 ವರ್ಷಗಳಿಂದ ಬಾಕ್ಸಿಂಗ್ ರಿಂಗ್ನಲ್ಲಿ ಹೋರಾಡುತ್ತಿದ್ದೇನೆ. ನನ್ನ ಜೀವನದಲ್ಲಿ, ಬಾಕ್ಸಿಂಗ್ಗಾಗಿ ಸಾಕಷ್ಟು ಪ್ರಯತ್ನ, ಕಠಿಣ ಪರಿಶ್ರಮವನ್ನು ಹಾಕಿದ್ದೇನೆ. ನನ್ನ ದೇಶಕ್ಕಾಗಿ, ನನ್ನ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಿದ್ದೇನೆ. ಈ ಮಾನ್ಯತೆಗಾಗಿ ನಾನು ನನ್ನ ಹೃದಯಾಂತರಾಳದಿಂದ ನಿಜವಾಗಿಯೂ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಹೇಳಿದ್ದರು.