ಕೊಲಂಬೊ: ಅಭಿಷೇಕ್ ಶರ್ಮ (87) ಮತ್ತು ಸಾಯಿ ಸುದರ್ಶನ್ (58*) ಅವರ ಬ್ಯಾಟಿಂಗ್ ಪರಾಕ್ರಮದಿಂದ ಎಸಿಸಿ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕ್ರಿಕೆಟ್(Emerging Asia Cup 2023) ಪಂದ್ಯಾವಳಿಯಲ್ಲಿ ಭಾರತ “ಎ” ತಂಡ ನೇಪಾಳ ವಿರುದ್ಧ 9 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲ್ ತಲುಪಿದೆ. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದೆ. ಈ ಪಂದ್ಯ ಬುಧವಾರ ನಡೆಯಲಿದೆ.
ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ನೇಪಾಳ ‘ಎ’ ಕೇವಲ 39 ಓವರ್‌ಗಳಲ್ಲಿ 167ಕ್ಕೆ ಕುಸಿಯಿತು. ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ 22.1 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 172 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ ACC Emerging Asia Cup 2023: ಯಶ್ ಧುಲ್ ಶತಕ; ಭಾರತಕ್ಕೆ ಗೆಲುವಿನ ಶುಭಾರಂಭ
ಸಣ್ಣ ಮೊತ್ತವನ್ನು ಚೇಸಿಂಗ್ ನಡೆಸುವ ವೇಳೆ ಭಾರತದ ಆರಂಭಿಕರಾದ ಸಾಯಿ ಸುದರ್ಶನ್(sai sudharsan) ಮತ್ತು ಅಭಿಷೇಕ್ ಶರ್ಮ(abhishek sharma) ಇಬ್ಬರೇ ಸೇರಿಕೊಂಡು ಮೊದಲ ವಿಕೆಟಿಗೆ 19 ಓವರ್‌ಗಳಲ್ಲಿ 139 ರನ್ ಒಟ್ಟುಗೂಡಿಸಿದರು. ಸ್ಫೋಟಕ ಆಟವಾಡಿದ ಅಭಿಷೇಕ್ 87 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರು. ಆ ಬಳಿಕ ಬಂದ ಧ್ರುವ ಜುರೆಲ್ ಅಜೇಯ 21 ರನ್ ಮಾಡಿದರು. ಸಾಯಿ ಸುದರ್ಶನ್ ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವುನ್ನು ಸಾರಿದರು. ಭಾರತ ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಪರಾಭವಗೊಳಿಸಿತ್ತು.
2️⃣ wins in a row for India 'A' 🙌
— BCCI (@BCCI) July 17, 2023
A clinical chase ensures a nine-wicket win against Nepal 👏
Scorecard – https://t.co/XoxpSdeexC…#ACCMensEmergingTeamsAsiaCup | #ACC pic.twitter.com/wehE5JRIVH
ಬಾಲಿಂಗ್ ವಿಭಾಗದಲ್ಲಿ ಮಿಂಚಿದ ನಿಶಾಂತ್ ಸಿಂಧು, ರಾಜವರ್ಧನ್ ಹಂಗರ್ಗೇಕರ್ ಮತ್ತು ಹರ್ಷಿತ್ ರಾಣಾ ಘಾತಕ ದಾಳಿ ನಡೆಸಿ ನೇಪಾಳವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ನಿಶಾಂತ್ ಸಿಂಧು 14 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಹಂಗರ್ಗೇಕರ್ 3 ಹಾಗೂ ರಾಣಾ 2 ವಿಕೆಟ್ ಕೆಡವಿದರು. ನೇಪಾಳ ಪರ ನಾಯಕ ರೋಹಿತ್ ಪೌದೆಲ್ ಸರ್ವಾಧಿಕ 65 ರನ್ ಬಾರಿಸಿದರು. ಉಳಿದಂತೆ ಎಲ್ಲ ಬ್ಯಾಟರ್ಗಳು ಭಾರತ ಬೌಲಿಂಗ್ ದಾಳಿಯನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು.
ಸಂಕ್ಷಿಪ್ತ ಸ್ಕೋರ್
ನೇಪಾಲ ಎ-39.2 ಓವರ್‌ಗಳಲ್ಲಿ 167 (ರೋಹಿತ್ ಪೌದೆಲ್ 65, ಗುಲ್ಶನ್ ಝಾ 38, ನಿಶಾಂತ್ ಸಿಂಧು 14ಕ್ಕೆ 4, ರಾಜವರ್ಧನ್ ಹಂಗಗೇìಕರ್ 25ಕ್ಕೆ 3, ಹರ್ಷಿತ್ ರಾಣಾ 16ಕ್ಕೆ 2). ಭಾರತ ಎ-22.1 ಓವರ್‌ಗಳಲ್ಲಿ ಒಂದು ವಿಕೆಟಿಗೆ 172 (ಅಭಿಷೇಕ್ ಶರ್ಮ 87, ಸಾಯಿ ಸುದರ್ಶನ್ ಔಟಾಗದೆ 58, ಧ್ರುವ ಜುರೆಲ್ ಔಟಾಗದೆ 21). ಪಂದ್ಯಶ್ರೇಷ್ಠ: ಅಭಿಷೇಕ್ ಶರ್ಮ.