ಮುಂಬಯಿ: 2023ರ ವಿಶ್ವಕಪ್ ಗೆಲ್ಲಲಿ, ಗೆಲ್ಲದೇ ಇರಲಿ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಹುದ್ದೆಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆಗಳಿವೆ. ಅವರು ಮುಂದುವರಿಯಲು ಒಪ್ಪದ ಕಾರಣ ವಿಶ್ವ ಕಪ್ ಬಳಿಕ ಬಿಸಿಸಿಐ ಜತೆಗಿನ ಒಪ್ಪಂದ ನವೀಕರಣಗೊಳ್ಳುವ ಸಾಧ್ಯತೆಗಳಿಲ್ಲ. ನಿಕಟ ಮೂಲಗಳ ಪ್ರಕಾರ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದೊಂದಿಗೆ ಸತತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಹೀಗಾಗಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗದೇ ಬೇಸರಗೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರು 2021ರಲ್ಲಿ ಒಪ್ಪಿಸಿದ್ದ ಕಾರಣ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಇದೀಗ ಅವರಿಗೆ ಸಾಕು ಎನಿಸಿದ್ದು ಮುಂದುವರಿಯುವ ಸಾಧ್ಯತೆಗಳು ಬಹುತೇಕ ಇಲ್ಲ. ಹೀಗಾಗಿ ಹೊಸ ಕೋಚ್ಗಾಗಿ ಹುಡುಕಾಟ ನಡೆಸಬೇಕಾಗಿದೆ ಬಿಸಿಸಿಐ.
ಇದು ಅವರಿಗೆ ಕಲ್ಲು, ಮುಳ್ಳುಗಳ ಹಾದಿಯ ಪ್ರಯಾಣವಾಗಿದೆ. ರಾಹುಲ್ ಕುಟುಂಬದೊಂದಿಗೆ ಜೀವನ ಸಾಗಿಸಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಅವರು ಆರಂಭದಲ್ಲಿ ಕೋಚ್ ಹುದ್ದೆಯನ್ನು ವಹಿಸಿಕೊಳ್ಳುವುದಕ್ಕೆ ಹಿಂಜರಿದಿದ್ದರು. ಒಪ್ಪಿಕೊಂಡ ಬಳಿಕವೂ ತಂಡದೊಂದಿಗೆ ನಿರಂತರ ದೀರ್ಘ ಪ್ರವಾಸಗಳಲ್ಲಿ ಪ್ರಯಾಣಿಸಬೇಕಾಯಿತು. ಹೀಗಾಗಿ ಭಾರತ ವಿಶ್ವಕಪ್ ಗೆದ್ದರೂ ಅವರು ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ,” ಎಂದು ಬಿಸಿಸಿಐ ಮೂಲಗಳು ಕ್ರೀಡಾ ವೆಬ್ಸೈಟ್ ಒಂಧರ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದನ್ನು ನಿರಾಕರಿಸಿದೆ. ರಾಹುಲ್ ದ್ರಾವಿಡ್ ಅವರ ನವೀಕರಣದ ಬಗ್ಗೆ ವಿಶ್ವಕಪ್ ಮೊದಲು ಅಥವಾ ನಂತರ ಬಿಸಿಸಿಐ ಅವರೊಂದಿಗೆ ಮಾತುಕತೆ ನಡೆಸುವುದಿಲ್ಲ. ಸದ್ಯಕ್ಕೆ ನಮ್ಮ ಗುರಿ 2023ರ ವಿಶ್ವಕಪ್ ಗೆಲ್ಲುವುದು ಎಂದು ಹೇಳಿದ್ದಾರೆ.
ವಿಸ್ತರಣೆ ಅಥವಾ ನವೀಕರಣದ ಬಗ್ಗೆ ರಾಹುಲ್ ಅವರೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ನಾವೆಲ್ಲರೂ ಈ ಸಮಯದಲ್ಲಿ ವಿಶ್ವಕಪ್ ಮೇಲೆ ಗಮನ ಹರಿಸಿದ್ದೇವೆ. ಹೌದು, ನಾವು ವಿಶ್ವಕಪ್ಗೆ ಮೊದಲು ರಾಹುಲ್ ಅವರೊಂದಿಗೆ ಚರ್ಚೆ ನಡೆಸುತ್ತೇವೆ. ಆದರೆ ಇಲ್ಲಿಯವರೆಗೆ, ಅವರು ಮುಂದುವರಿಯಲು ಬಯಸುವುದಿಲ್ಲ ಎಂದು ನಮಗೆ ಯಾವುದೇ ಸೂಚನೆ ಬಂದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್ ಸ್ಪೋರ್ಡ್ಸ್ಗೆ ತಿಳಿಸಿದ್ದಾರೆ.
ಟಿ20 ವಿಶ್ವಕಪ್ 2021ರ ವಿಶ್ವ ಕಪ್ ಮುಗಿದ ನಂತರ ರವಿ ಶಾಸ್ತ್ರಿ ಅವರಿಂದ ದ್ರಾವಿಡ್ ಕೋಚ್ ಹುದ್ದೆಯನ್ನು ವಹಿಸಿಕೊಂಡಿದ್ದರು. ಅಲ್ಲಿಂದ ಅರು ಮಿಶ್ರ ಫಲ ಉಂಡಿದ್ದಾರೆ. ಅವರ ನೇತೃತ್ವದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ತವರು ನೆಲದಲ್ಲಿ ಪ್ರಾಬಲ್ಯವನ್ನು ಸಾಧಿಸಿದೆ. ಆದಾಗ್ಯೂ, ಭಾರತವು ಟೆಸ್ಟ್ ಮತ್ತು ಏಕದಿನ ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ, ಏಕದಿನ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಮತ್ತು ಏಷ್ಯಾ ಕಪ್, ಟಿ 20 ವಿಶ್ವಕಪ್ ಮತ್ತು ಡಬ್ಲ್ಯುಟಿಸಿ ಫೈನಲ್ನಲ್ಲಿ ಸೋತಿದೆ.
ಇದನ್ನೂ ಓದಿ : Asian Games 2023 : ಏಷ್ಯನ್ ಗೇಮ್ಸ್ನ ಕ್ರಿಕೆಟ್ ವೇಳಾಪಟ್ಟಿಯ ಬಗ್ಗೆ ಇಲ್ಲಿದೆ ಮಾಹಿತಿ
ಭಾರತವು ಹಿರಿಯ ಆಟಗಾರರ ಬದಲಾವಣೆಯೊಂದಿಗೆ ತಂಡಕ್ಕೆ ಹೊಸ ರೂಪ ಕೊಡಲು ಪ್ರಯತ್ನಿಸುತ್ತಿರುವುದರಿಂದ ಬಿಸಿಸಿಐ ಹೊಸ ಆಲೋಚನೆಗಳನ್ನು ಹುಡುಕಬಹುದು. ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಅವರನ್ನು ಭಾರತ ತಂಡಕ್ಕೆ ಕೋಚ್ ಆಗಿ ತರುವ ಉದ್ದೇಶ ಹೊಂದಿದೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಒಪ್ಪಂದವನ್ನು ಕೊನೆಗೊಳಿಸಿದರೆ ವಿವಿಎಸ್ ಲಕ್ಷ್ಮಣ್ ಉತ್ತಮ ಆಯ್ಕೆಯಾಗಬಹುದು. ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದಾರೆ. ಈಗಾಗಲೇ ಅವರನ್ನು ಆಗಾಗ ಕೋಚ್ ಆಗಿ ಕಳುಹಿಸಲಾಗುತ್ತದೆ. ಆದರೆ ಈಗ, ಮತ್ತೆ, ಶಾಶ್ವತ ಕೋಚಿಂಗ್ ಪಾತ್ರದ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ.