ನವದೆಹಲಿ: ಭಾನುವಾರ ನಡೆದ ವಿಶ್ವಕಪ್ ಪಂದ್ಯದ ಫಲಿತಾಂಶ ಎಲ್ಲರಿಗೂ ಅಚ್ಚರಿ ಮೂಡಿಸಿತು. ಯಾರೂ ಊಹಿಸದ ರೀತಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ 69 ರನ್ ಅಂತರದಿಂದ ಮಗುಚಿ ಹಾಕಿತು. ಈ ಮೂಲಕ ಅಚ್ಚರಿಯ ಗೆಲುವು ಕಂಡು ಇತಿಹಾಸವೊಂದನ್ನು ಬರೆದಿದೆ.
ವಿಶ್ವಕಪ್ನಲ್ಲಿ 2ನೇ ಗೆಲುವು
ಅಫಘಾನಿಸ್ತಾನ ತಂಡಕ್ಕೆ ಇದು ಮೂರನೇ ಏಕದಿನ ವಿಶ್ವಕಪ್ ಟೂರ್ನಿ. 2015ರ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ವಿಶ್ವಕಪ್ ಟೂರ್ನಿಗೆ ಎಂಟ್ರಿ ಕೊಟ್ಟ ಆಫ್ಘನ್ ಇದುವರೆಗೂ ಕೇವಲ ಒಂದು ಪಂದ್ಯ ಮಾತ್ರ ಗೆದ್ದತಿತ್ತು. ಅದು ಕೂಡ 2015ರಲ್ಲಿಯೇ ಸ್ಕಾಟ್ಲೆಂಡ್ ವಿರುದ್ಧ. ಆ ಬಳಿಕ 2019ರಲ್ಲಿ ಆಡಿದ ವಿಶ್ವಕಪ್ನ 9 ಪಂದ್ಯದಲ್ಲಿಯೂ ಸೋಲು ಕಂಡಿತ್ತು. ಇದೀಗ ಸತತ 14 ಸೋಲಿನ ಬಳಿಕ ಮತ್ತೊಂದು ಗೆಲುವಿನ ಖಾತೆ ತೆರೆದಿದೆ. ಒಟ್ಟಾರೆ ಇದು ಅಫ್ಘಾನಿಸ್ತಾನಕ್ಕೆ ಒಲಿದ 2ನೇ ಗೆಲುವು. ಅದು ಕೂಡ ಹಾಲಿ ವಿಶ್ವ ಚಾಂಪಿಯನ್ ವಿರುದ್ಧ ಒಲಿದದ್ದು ನಿಜಕ್ಕೂ ಸಾಹಸವೇ ಸರಿ.
ಇದನ್ನೂ ಓದಿ ind vs Pak : ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ನಲ್ಲಿ ರಾಹುಲ್ಗೆ ಸಿಕ್ತು ವಿಶೇಷ ಪ್ರಶಸ್ತಿ
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಪೂರಕವಾಗಿರುವ ಪಿಚ್ನಲ್ಲಿ ಚೇಸ್ ಮಾಡಿ ಗೆಲ್ಲುವುದು ಸುಲಭ ಎಂಬ ಲೆಕ್ಕಾಚಾರದೊಂದಿಗೆ ಈ ನಿರ್ಧಾರ ತೆಗೆದುಕೊಂಡಿತು. ಜತೆಗೆ ಅಫಘಾನಿಸ್ತಾನ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಉದ್ದೇಶ ಹೊಂದಿತ್ತು. ಆಂತೆಯೇ ಮೊದಲು ಬ್ಯಾಟ್ ಮಾಡಿದ ಅಫಘಾನಿಸ್ತಾನ ತಂಡ 49.5 ಓವರ್ಗಳಲ್ಲಿ 284 ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 40.3 ಓವರ್ಗಳಲ್ಲಿ 215 ರನ್ಗಳಿಗೆ ಆಲ್ಔಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಸೇಡು ತೋರಿಸಿಕೊಂಡ ಆಫ್ಘನ್
2019ರ ವಿಶ್ವಕಪ್ನಲ್ಲಿ ಮ್ಯಾಂಚೆಸ್ಟರ್ನಲ್ಲಿ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ 150 ರನ್ಗಳ ಹೀನಾಯ ಸೋಲಿಗೆ ಒಳಗಾಗಿತ್ತು. ಇದೀಗ ಈ ಸೇಡನ್ನು ತೀರಿಸಿಕೊಂಡಿದೆ. ಆಂಗ್ಲರಿಗೆ ಅಚ್ಚರಿಯ ಸೋಲಿನ ಶಾಕ್ ನೀಡಿದೆ. ಇತ್ತಂಡಗಳ ಮೂರನೇ ಮುಖಾಮುಖಿ ಇದಾಗಿತ್ತು. 2015ರಲ್ಲಿ ಹಾಗೂ 2019ರಲ್ಲಿ ಇಂಗ್ಲೆಂಡ್ ಪಾರಮ್ಯ ಮೆರೆದಿತ್ತು. ಇದೀಗ ನವ ದೆಹಲಿಯಲ್ಲಿ ಆಫ್ಘನ್ ಗೆದ್ದು ಬೀಗಿದೆ. ಈ ಫಲಿತಾಂಶವನ್ನು ಕ್ರಿಕೆಟ್ ಪಂಡಿತರು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಕ್ರಿಕೆಟ್ನಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ಈ ಫಲಿತಾಂಶವೇ ಮತ್ತೊಂದು ಸಾಕ್ಷಿ ಎನಿಸಿತು. ಈ ಗೆಲುವಿನಿಂದ ಆಫ್ಘನ್ ಆತ್ಮವಿಶ್ವಾಸ ಹೆಚ್ಚಿದರಲ್ಲಿ ಯಾವುದೇ ಅನುಮಾನವಿಲ್ಲ. ಜತೆಗೆ ಬಲಿಷ್ಠ ತಂಡಗಳಿಗೂ ಭಯವೊಂದು ನಿರ್ಮಾಣವಾಗಿದೆ.
ಟ್ರೋಲ್ ಆದ ಇಂಗ್ಲೆಂಡ್
2019ರ ವಿಶ್ವ ಕಪ್ ಫೈನಲ್ನಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲ್ಯಾಂಡ್ ತಂಡನವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು. ಅಂದ ಹಾಗೆ ಫೈನಲ್ನಲ್ಲಿ ಪಂದ್ಯ ಟೈ ಆಗಿತ್ತು. ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆಗಿತ್ತು. ಬಳಿಕ ಅತ್ಯಧಿಕ ಬಾರಿ ಚೆಂಡನ್ನು ಬೌಂಡರಿ ಲೆಕ್ಕಾಚಾರದ ಪ್ರಕಾರ ಇಂಗ್ಲೆಂಡ್ ತಂಡ ವಿಜೇತ ಎಂದು ಘೋಷಿಸಲಾಗಿತ್ತು. ಇದು ವಿಶ್ವ ಕಪ್ ಇತಿಹಾಸದ ಅತ್ಯಂತ ವಿವಾದಾತ್ಮಕ ಫಲಿತಾಂಶವಾಗಿದೆ. ಈ ಬಗ್ಗೆ ರನ್ನರ್ಅಪ್ ನ್ಯೂಜಿಲ್ಯಾಂಡ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಅಫಘಾನಿಸ್ತಾನ ವಿರುದ್ದ ಅಭಿಮಾನಿಗಳು ಹಳೆಯ ಫಲಿತಾಂಶವನ್ನು ಸೇರಿಸಿಕೊಂಡು ಟೀಕೆ ಮಾಡಿದ್ದಾರೆ.