Site icon Vistara News

ENG vs AFG: ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಭೂಕಂಪ ಸಂತ್ರಸ್ತರಿಗೆ ಅರ್ಪಿಸಿದ ಮುಜೀಬ್

PLAYER OF THE MATCH Mujeeb Ur Rahman

ನವದೆಹಲಿ: ಇಂಗ್ಲೆಂಡ್(ENG vs AFG)​ ವಿರುದ್ಧದ ಐತಿಹಾಸಿಕ ವಿಶ್ವಕಪ್ ಪಂದ್ಯದ​ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮುಜೀಬ್​ ಉರ್​ ರೆಹಮಾನ್(Mujeeb Ur Rahman)​ ಅವರು ತನ್ನ ಈ ಗೌರವವನ್ನು ಅಫಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಸಂತ್ರಸ್ತರಿಗೆ ಅರ್ಪಿಸಿದ್ದಾರೆ. ಭಾನುವಾರ ನಡೆದ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ 69ರನ್​ಗಳ ಗೆಲುವು ಸಾಧಿಸಿತ್ತು.

ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಪಂದ್ಯಶ್ರೇಷ್ಠ ವಿಜೇತ ಮುಜೀಬ್​ ಉರ್​ ರೆಹಮಾನ್, “ಈ ಗೆಲುವು ನಮ್ಮಲ್ಲಿ ಹೊಸ ಹುರುಪನ್ನು ಮೂಡಿಸಿದೆ. ಅಲ್ಲದೆ ಆತ್ಮವಿಶ್ವಾಸ ಹೆಚ್ಚಿಸಿದೆ. ನಿಜಕ್ಕೂ ನಮ್ಮ ಪಾಲಿಗೆ ಈ ಗೆಲುವು ವಿಶ್ವಕಪ್​ ಟ್ರೋಫಿ ಗೆದ್ದಂತೆ ಆಗಿದೆ. ಅದೂ ಕೂಡ ಹಾಲಿ ಚಾಂಪಿಯನ್​ ವಿರುದ್ಧ ಗೆಲುವು ಸಾಧಿಸಿದ್ದೇವೆ. ಇದೇ ಲಯವನ್ನು ಮುಂದಿನ ಪಂದ್ಯದಲ್ಲಿಯೂ ಮುಂದುವರಿಸುತ್ತೇವೆ” ಎಂದು ಹೇಳಿದರು.

“ನಾನು ಪಡೆದ ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನನ್ನ ತವರಿನಲ್ಲಿ ಸಂಭವಿಸಿದ ಭೂಕಂಪದಲ್ಲಿ ನಿರಾಶ್ರಿತರಾದ ಸಂತ್ರಸ್ತರಿಗೆ ಅರ್ಪಿಸುತ್ತೇನೆ. ಅವರಲ್ಲಿ ಮತ್ತೆ ಬದುಕು ಕಟ್ಟುವ ಆಸೆ ಚಿಗುರೊಡೆಯಬೇಕು ಎನ್ನುವ ನಿಟ್ಟಿನಲ್ಲಿ ಅವರಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ” ಎಂದರು.

ಮುಜೀಬ್ ಉರ್​ ರೆಹಮಾನ್ ಅವರು ಬ್ಯಾಟಿಂಗ್‌ನಲ್ಲಿ 28 ರನ್ ಗಳಿಸಿದ್ದಲ್ಲದೆ, ಇಂಗ್ಲೆಂಡ್ ತಂಡದ ನಿರ್ಣಾಯಕ ಮೂರು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ರಶೀದ್​ ಖಾನ್​ ಕೂಡ ಉತ್ತಮ ಸಾಥ್​ ನೀಡಿದರು. ರಶೀದ್​ ಕೂಡ ಮೂರು ವಿಕೆಟ್​ ಪಡೆದರು.

ವಿಶ್ವಕಪ್​ನಲ್ಲಿ 2ನೇ ಗೆಲುವು

ಅಫಘಾನಿಸ್ತಾನ ತಂಡಕ್ಕೆ ಇದು ಮೂರನೇ ಏಕದಿನ ವಿಶ್ವಕಪ್​ ಟೂರ್ನಿ. 2015ರ ಆವೃತ್ತಿಯಲ್ಲಿ ಚೊಚ್ಚಲ ಬಾರಿಗೆ ವಿಶ್ವಕಪ್ ಟೂರ್ನಿಗೆ ಎಂಟ್ರಿ ಕೊಟ್ಟ ಆಫ್ಘನ್​​ ಇದುವರೆಗೂ ಕೇವಲ ಒಂದು ಪಂದ್ಯ ಮಾತ್ರ ಗೆದ್ದತಿತ್ತು. ಅದು ಕೂಡ 2015ರಲ್ಲಿಯೇ ಸ್ಕಾಟ್ಲೆಂಡ್‌ ವಿರುದ್ಧ. ಆ ಬಳಿಕ 2019ರಲ್ಲಿ ಆಡಿದ ವಿಶ್ವಕಪ್​ನ 9 ಪಂದ್ಯದಲ್ಲಿಯೂ ಸೋಲು ಕಂಡಿತ್ತು. ಇದೀಗ ಸತತ 14 ಸೋಲಿನ ಬಳಿಕ ಮತ್ತೊಂದು ಗೆಲುವಿನ ಖಾತೆ ತೆರೆದಿದೆ. ಒಟ್ಟಾರೆ ಇದು ಅಫ್ಘಾನಿಸ್ತಾನಕ್ಕೆ ಒಲಿದ 2ನೇ ಗೆಲುವು. ಅದು ಕೂಡ ಹಾಲಿ ವಿಶ್ವ ಚಾಂಪಿಯನ್​ ವಿರುದ್ಧ ಒಲಿದದ್ದು ನಿಜಕ್ಕೂ ಸಾಹಸವೇ ಸರಿ.

ಅರುಣ್​ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಪೂರಕವಾಗಿರುವ ಪಿಚ್​ನಲ್ಲಿ ಚೇಸ್ ಮಾಡಿ ಗೆಲ್ಲುವುದು ಸುಲಭ ಎಂಬ ಲೆಕ್ಕಾಚಾರದೊಂದಿಗೆ ಈ ನಿರ್ಧಾರ ತೆಗೆದುಕೊಂಡಿತು. ಜತೆಗೆ ಅಫಘಾನಿಸ್ತಾನ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಉದ್ದೇಶ ಹೊಂದಿತ್ತು. ಆಂತೆಯೇ ಮೊದಲು ಬ್ಯಾಟ್​ ಮಾಡಿದ ಅಫಘಾನಿಸ್ತಾನ ತಂಡ 49.5 ಓವರ್​ಗಳಲ್ಲಿ 284 ರನ್ ಬಾರಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 40.3 ಓವರ್​ಗಳಲ್ಲಿ 215 ರನ್​ಗಳಿಗೆ ಆಲ್​ಔಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತು.

Exit mobile version