ಬ್ರಿಸ್ಬೇನ್: ಸೆಮಿಫೈನಲ್ ತಲುಪಲು ಗೆಲುವು ಸಾಧಿಸಲೇಬೇಕಾದ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್(ENG VS NZ) ವಿರುದ್ಧ 20 ರನ್‌ಗಳ ಜಯ ಸಾಧಿಸಿದೆ. ಇಂಗ್ಲೆಂಡ್ ತಂಡದ ಈ ಗೆಲುವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈ ಗೆಲುವಿನೊಂದಿಗೆ ಜೋಸ್ ಬಟ್ಲರ್ ಪಡೆ ಗುಂಪು 1 ರಲ್ಲಿ ಎರಡನೇ ಸ್ಥಾನಕ್ಕೆ ಏರಿದರೆ, ಆಸ್ಟ್ರೇಲಿಯಾ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದು ಟೂರ್ನಿಯಿಂದಲೇ ಹೊರಗುಳಿಯುವ ಭೀತಿಯಲ್ಲಿದ್ದಾರೆ.
ಗಬ್ಬಾ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ದ್ವಿತೀಯ ಮುಖಾಮುಖಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತನ್ನ ಪಾಲಿನ ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಉತ್ತಮ ಆರಂಭವನ್ನೇ ಒದಗಿಸಿದರು. ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಲು ಆರಂಭಿಸಿದ ಈ ಜೋಡಿ ಬಳಿಕ ಕಿವೀಸ್ ಬೌಲರ್ಗಳ ಮೇಲೆರಗಿ. ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ರನ್ ಗಳಿಕೆಗೆ ವೇಗ ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 81 ರನ್ ಒಟ್ಟುಗೂಡಿಸಿತು. ಅಲೆಕ್ಸ್ ಹೇಲ್ಸ್ 40 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 52 ರನ್ ಗಳಿಸಿದರೆ. ನಾಯಕ ಜಾಸ್ ಬಟ್ಲರ್ 47 ಎಸೆತಗಳಲ್ಲಿ 73 ರನ್ ಗಳಿಸಿ ಸ್ಫೋಟಕ ಆಟವಾಡಿದರು. ಈ ವೇಳೆ 7 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಯಲ್ಟಟ್ಟಿತು. ನ್ಯೂಜಿಲೆಂಡ್ ಪರ ಲಾಕಿ ಫರ್ಗ್ಯೂಸನ್ 45 ರನ್ ಬಿಟ್ಟುಕೊಟ್ಟು 2 ವಿಕೆಟ್ ಉರುಳಿಸಿದರು. ಉಳಿದಂತೆ ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ ತಲಾ ಒಂದು ವಿಕೆಟ್ ಪಡೆದರು.
180 ರನ್‌ಗಳ ಸವಾಲು ಬೆನ್ನಟ್ಟಿದ ಕಿವೀಸ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಫಿನ್ ಅಲೆನ್ 11 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಡೆವೋನ್ ಕಾನ್ವೆ 9 ಎಸೆತಗಳಲ್ಲಿ 3 ರನ್ ಗಳಿಸಿ ನಿರಾಸೆ ಅನುಭವಿಸಿದರು. ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಆಸರೆಯಾದರೂ ಅವರ ನಿಧಾನಗತಿಯ ಆಟ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಗ್ಲೆನ್ ಫಿಲಿಪ್ಸ್ ವೇಗವಾಗಿ ರನ್ ಗಳಿಸುತ್ತಿದ್ದರೆ ಮತ್ತೊಂದೆಡೆ ವಿಲಿಯಮ್ಸನ್ ನಿಧಾನ ಗತಿಯ ಬ್ಯಾಟಿಂಗ್ ನಡೆಸಿದರು. 40 ಎಸೆತಗಳಲ್ಲಿ ಕೇವಲ 3 ಬೌಂಡರಿ ಮೂಲಕ 40 ರನ್ ಗಳಿಸಿ ಔಟಾದರು. ಅಂತಿಮವಾಗಿ ಏಕಾಂಗಿ ಹೋರಾಟ ನಡೆಸಿದ ಗ್ಲೆನ್ ಫಿಲಿಪ್ಸ್ 36 ಎಸೆತಗಳಲ್ಲಿ 62 ರನ್ ಗಳಿಸಿ ಔಟಾದರು. ಇಂಗ್ಲೆಂಡ್ ಪರ ಸ್ಯಾಮ್ ಕರನ್ 26ಕ್ಕೆ 2 ವಿಕೆಟ್ ಕಿತ್ತು ಮಿಂಚಿದರು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 20 ಓವರ್ಗಳಲ್ಲಿ 6 ವಿಕೆಟ್ಗೆ 179 (ಜೋಸ್ ಬಟ್ಲರ್ 73, ಹೇಲ್ಸ್ 52, ಫರ್ಗ್ಯೂಸನ್ 45ಕ್ಕೆ 2).
ನ್ಯೂಜಿಲೆಂಡ್: 20 ಓವರ್ಗಳಲ್ಲಿ 6 ವಿಕೆಟ್ಗೆ 159(ಗ್ಲೆನ್ ಫಿಲಿಪ್ಸ್ 62, ವಿಲಿಯಮ್ಸನ್ 40, ಸ್ಯಾಮ್ ಕರನ್ 26ಕ್ಕೆ 2).
ಇದನ್ನೂ ಓದಿ | KL Rahul | ಕೆ.ಎಲ್. ರಾಹುಲ್ ಅದ್ಭುತ ಆಟಗಾರ; ಕೋಚ್ ರಾಹುಲ್ ದ್ರಾವಿಡ್ ವಿಶ್ವಾಸ