ಮೌಂಟ್ ಮೌಂಗನುಯಿ: ಆತಿಥೇಯ ನ್ಯೂಜಿಲ್ಯಾಂಡ್(ENG VS NZ) ವಿರುದ್ಧದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 267 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಕಿವೀಸ್ ನೆಲದಲ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇತಿಹಾಸ ನಿರ್ಮಿಸಿತು.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ಗೆ 325 ರನ್ ಗಳಿಸಿ ಡಿಕ್ಲೇರ್ ಮಾಡಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 306 ರನ್ ಗಳಿಸಿ ಆಲೌಟ್ ಆಯಿತು. 19 ರನ್ಗಳ ಲೀಡ್ ಪಡೆದ ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ನಲ್ಲಿ 374 ರನ್ಗಳಿಸಿ ಸರ್ವಪತನ ಕಂಡಿತು.
ಮೊದಲ ಇನಿಂಗ್ಸ್ ಹಿನ್ನಡೆ ಸೇರಿ ಒಟ್ಟು 393 ರನ್ ಗೆಲುವಿನ ಗುರಿ ಪಡೆದ ನ್ಯೂಜಿಲ್ಯಾಂಡ್ ಪಂದ್ಯದ ನಾಲ್ಕನೇ ದಿನ ಭಾನುವಾರ (ಫೆ.19) ವೇಗಿಗಳಾದ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಅವರ ದಾಳಿಗೆ ಕುಸಿದು 126 ರನ್ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಗೆಲುವು ದಾಖಲಿಸಿದ ಇಂಗ್ಲೆಂಡ್ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ಅಂತಿಮ ಪಂದ್ಯ ಫೆ.24ರಿಂದ ಆರಂಭವಾಗಲಿದೆ.