ವೆಲ್ಲಿಂಗ್ಟನ್: ಅತ್ಯಂತ ರೋಚವಾಗಿ ಸಾಗಿದ ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್(ENG VS NZ) ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಂತಿಮವಾಗಿ ಕಿವೀಸ್ ಕೈ ಮೇಲಾಗಿದೆ. ಒಂದು ರನ್ ಅಂತರದಿಂದ ಜಯ ಸಾಧಿಸುವ ಮೂಲಕ ನ್ಯೂಜಿಲ್ಯಾಂಡ್ ಐತಿಹಾಸಿಕ ಗೆಲುವೊಂದನ್ನು ದಾಖಲಿಸಿ ಮೆರೆದಾಡಿತು.
ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದ್ದ ಕಿವೀಸ್ ಎರಡನೇ ಪಂದ್ಯದಲ್ಲಿ ಆಂಗ್ಲರನ್ನು ಮಣಿಸುವ ಮೂಲಕ ಸರಣಿಯನ್ನು 1-1 ಸಮಬಲದೊಂದಿಗೆ ಮುಕ್ತಾಯಗೊಳಿಸಿತು. ಗೆಲುವಿಗೆ 258 ರನ್ ಪಡೆದ ಬೆನ್ ಸ್ಟೋಕ್ಸ್ ಬಳಗ 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 48 ರನ್ ಮಾಡಿತ್ತು.
ಅಂತಿಮ ದಿನವಾದ ಮಂಗಳವಾರ(ಫೆ.28) ಆಟ ಮುಂದುವರಿಸಿದ ಇಂಗ್ಲೆಂಡ್ ತಂಡಕ್ಕೆ ಕಿವೀಸ್ ವೇಗಿಗಳಾದ ನೀಲ್ ವೆಗ್ನರ್(4) ಮತ್ತು ಟಿಮ್ ಸೌಥಿ(3) ಘಾತಕ ಬೌಲಿಂಗ್ ನಡೆಸಿ ಸೋಲಿನ ರುಚಿ ತೋರಿಸಿದರು. ಇಂಗ್ಲೆಂಡ್ 256 ರನ್ ಗಳಿಗೆ ಸರ್ವಪತನ ಕಂಡು ಕೇವಲ ಒಂದು ರನ್ ಅಂತರದ ಸೋಲು ಕಂಡಿತು.
ಕೊನೆಯ ವಿಕೆಟ್ಗೆ ಇಂಗ್ಲೆಂಡ್ ತಂಡಕ್ಕೆ ಗೆಲುವಿಗೆ ಏಳು ರನ್ ಅಗತ್ಯವಿತ್ತು. ಇದೇ ವೇಳೆ ಜೇಮ್ಸ್ ಆ್ಯಂಡರ್ಸನ್ ಬೌಂಡರಿ ಬಾರಿಸಿ ಇನ್ನೇನು ಪಂದ್ಯಕ್ಕೆ ಗೆಲುವು ಸಾರಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ವ್ಯಾಗ್ನರ್ ಎಸೆತದಲ್ಲಿ ಕೀಪರ್ ಬ್ಲಂಡಲ್ಗೆ ಆ್ಯಂಡರ್ಸನ್ ಕ್ಯಾಚಿ ನೀಡಿ ನಿರಾಸೆ ಮೂಡಿಸಿದರು. ಇದರೊಂದಿಗೆ ಆಂಗ್ಲರು ಸೋಲನುಭವಿಸಿದರು. ಇಂಗ್ಲೆಂಡ್ ಪರ ದ್ವಿತೀಯ ಇನಿಂಗ್ಸ್ನಲ್ಲಿ ಜೋ ರೂಟ್ 95, ವಿಕೆಟ್ ಕೀಪರ್ ಬೆನ್ ಫೋಕ್ಸ್ 35, ನಾಯಕ ಬೆನ್ ಸ್ಟೋಕ್ಸ್ 33 ರನ್ ಮಾಡಿದರು.
ಇದನ್ನೂ ಓದಿ ENG VS NZ: ಕಿವೀಸ್ನಲ್ಲಿ 15 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್
ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನ 146 ವರ್ಷಗಳ ಇತಿಹಾಸದಲ್ಲಿ ಈವರೆಗೆ 2,494 ಪಂದ್ಯಗಳು ನಡೆದಿದ್ದು ಅದರಲ್ಲಿ ಫಾಲೋ ಆನ್ ಹೇರಿದ ಮೇಲೆಯೂ ಗೆದ್ದ ಮೂರನೇ ತಂಡ ಎಂಬ ಹಿರಿಮೆಗೆ ನ್ಯೂಜಿಲ್ಯಾಂಡ್ ಪಾತ್ರವಾಗಿದೆ. ಜತೆಗೆ ಈ ರೀತಿ ಗೆಲುವು ದಾಖಲಾದ ನಾಲ್ಕನೇ ಪಂದ್ಯ ಇದಾಗಿದೆ. ಇದಕ್ಕೂ ಮೊದಲು ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ರೀತಿಯ ಗೆಲುವು ಸಾಧಿಸಿದ್ದವು. ಇದರ ಹೊರತಾಗಿ ಟೆಸ್ಟ್ನಲ್ಲಿ ಒಂದು ರನ್ ಅಂತರದಲ್ಲಿ ಗೆಲುವು ಸಾಧಿಸಿದ ಎರಡನೇ ಪಂದ್ಯ ಇದಾಗಿದೆ.