ಕರಾಚಿ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿದ ಪಾಕಿಸ್ತಾನ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗಿ ಹ್ಯಾರಿಸ್ ರಾವುಫ್ ಗಾಯದ ಸಮಸ್ಯೆಯಿಂದ 2ನೇ ಟೆಸ್ಟ್‌ಗೆ ಅಲಭ್ಯರಾಗಿದ್ದಾರೆ. ಮೂಲಗಳ ಪ್ರಕಾರ ರಾವುಫ್ ಟೆಸ್ಟ್ ಸರಣಿಯಿಂದಲೇ ಹೊರಬಿದ್ದಿದ್ದಾರೆ ಎನ್ನಲಾಗಿದೆ.
ಸರಣಿಯಲ್ಲಿ ಈಗಾಗಲೇ ಒಂದು ಪಂದ್ಯವನ್ನು ಸೋಲುವ ಮೂಲಕ 0-1 ಹಿನ್ನೆಡೆ ಅನುಭವಿಸಿರುವ ಪಾಕಿಸ್ತಾನಕ್ಕೆ ಇದು ಮತ್ತೊಂದು ಹಿನ್ನಡೆಯಾಗಿದೆ. “ಬಲಗಾಲಿನ ಗಾಯಕ್ಕೆ ತುತ್ತಾಗಿರುವ ಕಾರಣ ರಾವುಫ್ ವಿಶ್ರಾಂತಿ ಪಡೆಯಲಿದ್ದಾರೆ. ಅದರಂತೆ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದಿಲ್ಲ” ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಉಭಯ ತಂಡಗಳ ದ್ವಿತೀಯ ಟೆಸ್ಟ್ ಪಂದ್ಯ ಡಿಸೆಂಬರ್ 9ರಂದು ಮುಲ್ತಾನ್‌ನಲ್ಲಿ ಆರಂಭವಾಗಲಿದೆ.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರಾವುಫ್ ಮೊದಲ ದಿನವೇ ಫೀಲ್ಡಿಂಗ್ ವೇಳೆ ಕಾಲಿಗೆ ಗಾಯಮಾಡಿಕೊಂಡಿದ್ದರು. ಬಳಿಕ ಅವರು ಬೌಲಿಂಗ್ ನಡೆಸಲಿಲ್ಲ. ಆದರೆ ನೋವಿನ ನಡುವೆಯೂ ಬ್ಯಾಟಿಂಗ್ ನಡೆಸಿದ್ದರು. ಇದೀಗ ಹ್ಯಾರಿಸ್ ರಾವುಫ್ ಬದಲಿಗೆ ಆಡುವ ಬಳಗದಲ್ಲಿ ಮೊಹಮ್ಮದ್ ವಾಸಿಂ ಜೂನಿಯರ್ಗೆ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ | ENGvsPAK | ಪಾಕಿಸ್ತಾನವನ್ನು ಹಣಿದ ಖುಷಿಯ ನಡುವೆ ಆಂಗ್ಲರ ಪಡೆಗೆ ಹಿನ್ನಡೆ; ಪ್ರಮುಖ ಆಲ್‌ರೌಂಡರ್‌ಗೆ ಗಾಯ