ಕರಾಚಿ: ಇಂಗ್ಲೆಂಡ್ ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಭಾನುವಾರ ಬೆಳಗ್ಗೆ ಪಾಕಿಸ್ತಾನಕ್ಕೆ ಬಂದಿಳಿದಿದೆ. ಬರೋಬ್ಬರಿ 17 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್(ENG VS PAK) ತಂಡವು ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನಾಡುತ್ತಿದೆ. ಇಂಗ್ಲೆಂಡ್ ಕೊನೆಯ ಬಾರಿ 2005ರಲ್ಲಿ ಪಾಕ್ನಲ್ಲಿ ಟೆಸ್ಟ್ ಆಡಿತ್ತು.
ಕಳೆದ ವರ್ಷ ಇಂಗ್ಲೆಂಡ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಇದಕ್ಕೂ ಮೊದಲು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡವು ಭದ್ರತೆಯ ನೆಪವೊಡ್ಡಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಕೂಡಾ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿತ್ತು.
ಅನುಮಾನಕ್ಕೆ ತೆರೆ
ಕೆಲುವು ದಿನಗಳ ಹಿಂದೆ ವಜೀರಾಬಾದ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಇಂಗ್ಲೆಂಡ್ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆಯೇ ಎನ್ನುವ ಅನುಮಾನ ಸೃಷ್ಟಿಯಾಗಿತ್ತು. ಆದರೆ ಇದೀಗ ಬೆನ್ ಸ್ಟೋಕ್ಸ್ ಸಾರಥ್ಯದ ಇಂಗ್ಲೆಂಡ್ ತಂಡ ಪಾಕಿಸ್ತಾನ ತಲುಪಿದ್ದು ಎಲ್ಲ ಅನುಮಾನಗಳಿಗೆ ತರೆಬಿದ್ದಂತಾಗಿದೆ. ಪಾಕಿಸ್ತಾನ ತಲುಪಿದ ಬಳಿಕ ನಾಯಕ ಬೆನ್ ಸ್ಟೋಕ್ಸ್ ಟ್ವಿಟರ್ನಲ್ಲಿ “ಹಲೋ ಪಾಕಿಸ್ತಾನ್” ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿದ್ದು, ಡಿಸೆಂಬರ್ 1ರಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಡಿಸೆಂಬರ್ 09ರಂದು ಮುಲ್ತಾನ್ ಹಾಗೂ ಡಿಸೆಂಬರ್ 17ರಂದು ಕರಾಚಿಯಲ್ಲಿ ದ್ವಿತೀಯ ಮತ್ತು ಮೂರನೇ ಟೆಸ್ಟ್ ಪಂದ್ಯವನ್ನಾಡಲಿದೆ.
ಇದನ್ನೂ ಓದಿ | IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ದ್ವಿತೀಯ ಪಂದ್ಯ ಮಳೆಯಿಂದ ರದ್ದು