ಕರಾಚಿ: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಮೊದಲ ಪಂದ್ಯವನ್ನು ಗೆದ್ದಿರುವ ಇಂಗ್ಲೆಂಡ್ ತಂಡ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯ ಶುಕ್ರವಾರ ಮುಲ್ತಾನ್ನಲ್ಲಿ (ಡಿಸೆಂಬರ್ 9) ನಡೆಯಲಿದೆ. ಆದರೆ ಇದೀಗ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಆಟಗಾರರು ಭಯಭೀತರಾಗಿದ್ದಾರೆ.
17 ವರ್ಷಗಳ ಬಳಿಕ ಪಾಕಿಸ್ತಾನ ವಿರುದ್ಧ ಸರಣಿ ಆಡಲು ತೆರಳಿರುವ ಇಂಗ್ಲೆಂಡ್ ತಂಡಕ್ಕೆ ಇದೀಗ ಆತಂಕ ಎದುರಾಗಿದೆ. ಮುಲ್ತಾನ್ನಲ್ಲಿ ಇಂಗ್ಲೆಂಡ್ ತಂಡವು ತಂಗಿದ್ದ ಹೋಟೆಲ್ ಬಳಿಯೇ ಗುರುವಾರ ಭಾರಿ ಗುಂಡಿನ ದಾಳಿಗಳು ನಡೆದಿದೆ. ಇದು ಆಟಗಾರರ ಆತಂಕಕ್ಕೆ ಕಾರಣವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸ್ಥಳೀಯ ಗ್ಯಾಂಗ್ ನಡುವೆ ಈ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಎರಡನೇ ಟೆಸ್ಟ್‌ಗೆ ತಯಾರಿ ನಡೆಸಲು ಇಂಗ್ಲೆಂಡ್ ತಂಡ ಹೋಟೆಲ್‌ನಿಂದ ಮುಲ್ತಾನ್ ಸ್ಟೇಡಿಯಂಗೆ ಹೊರಡುವ ವೇಳೆ ಈ ಘಟನೆ ನಡೆದಿದೆ. ಆದರೆ ಆಟಗಾರರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಭರವಸೆ ನೀಡಿದ ಪಾಕ್ ಕ್ರಿಕೆಟ್ ಮಂಡಳಿ
ಈ ಘಟನೆ ನಡೆದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಉನ್ನತ ಮಟ್ಟದ ಸಭೆ ನಡೆಸಿದ್ದು ಆಟಗಾರರ ಸುರಕ್ಷತೆಗೆ ಮತ್ತಷ್ಟು ಭದ್ರತೆ ನೀಡುವುದಾಗಿ ತಿಳಿಸಿದೆ. ಹಾಗೆಯೇ ಮುಲ್ತಾನ್ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯವನ್ನು ಬಿಗಿ ಭದ್ರತೆಯೊಂದಿಗೆ ನಡೆಸಲು ಪಿಸಿಬಿ ನಿರ್ಧರಿಸಿದೆ.
ಆಟಗಾರರಿಗೆ ಪ್ರಧಾನಿಗೆ ನೀಡುವ ಭದ್ರತೆ
ಸದ್ಯ ಇಂಗ್ಲೆಂಡ್ ತಂಡಕ್ಕೆ ಪಾಕಿಸ್ತಾನದಲ್ಲಿ ದೇಶದ ಪ್ರಧಾನಿಗೆ ನೀಡಲಾಗುವ ಮಟ್ಟದ ಭದ್ರತೆ ಕಲ್ಪಿಸಲಾಗಿದೆ. ಅದರಂತೆ ಆಟಗಾರರು ತಂಗಿರುವ ಹೋಟೆಲ್ ಸುತ್ತಮುತ್ತ ಭದ್ರತೆಗಾಗಿ ಸ್ಥಳೀಯ ಪೊಲೀಸರ ಜತೆಗೆ ಸೇನೆಯನ್ನೂ ನಿಯೋಜಿಸಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ವಕ್ತಾರರು ಖಚಿತಪಡಿಸಿದ್ದಾರೆ. ಸದ್ಯ ಇಂಗ್ಲೆಂಡ್ ತಂಡಕ್ಕೆ ಭದ್ರತಾ ಭೀತಿ ಎದುರಾಗಿದ್ದು ಆಂಗ್ಲರು ಈ ಸರಣಿಯನ್ನು ಮುಂದುವರಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ | IND VS BAN | ಭಾರತ ವಿರುದ್ಧದ ಟೆಸ್ಟ್ ಸರಣಿಗೆ 17 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ