ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವ ಕಪ್ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ(PAK VS ENG) ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಈ ಪಂದ್ಯ ಭಾನುವಾರ(ನವೆಂಬರ್ 13) ಮೆಲ್ಬೋರ್ನ್ ಮೈದಾನದಲ್ಲಿ ನಡೆಯಲಿದ್ದು ಈ ಪಂದ್ಯದ ಪಿಚ್ ರಿಪೋರ್ಟ್ ಮತ್ತು ಹಮಾಮಾನ ವರದಿ ಇಂತಿವೆ.
ಪಿಚ್ ರಿಪೋರ್ಟ್
ಆಸ್ಟ್ರೇಲಿಯಾದ ಇತರೆ ಮೈದಾನಗಳಿಗೆ ಹೋಲಿಸಿದರೆ, ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ತುಂಬಾ ವಿಭಿನ್ನವಾಗಿದೆ. ಇಲ್ಲಿ ಬೌನ್ಸ್ ಹಾಗೂ ಹೆಚ್ಚಿನ ಸ್ವಿಂಗ್ ಇದ್ದು, ವೇಗಿಗಳಿಗೆ ಅನುಕೂಲವಾಗಲಿದೆ. ಈ ಮೈದಾನದಲ್ಲಿ ಒಟ್ಟು 21 ಟಿ20 ಪಂದ್ಯಗಳು ನಡೆದಿದ್ದು 11 ಬಾರಿ ಚೇಸಿಂಗ್ ನಡೆಸಿದ ತಂಡಗಳು ಮೇಲುಗೈ ಸಾಧಿಸಿವೆ. ಆದ್ದರಿಂದ ಈ ಪಂದ್ಯದಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಪಂದ್ಯಕ್ಕೆ ಆರಂಭದಲ್ಲಿ ಮಳೆ ಅಡ್ಡಿಪಡಿಸಿದರೆ ಆಗ ಮೊದಲು ಬ್ಯಾಟಿಂಗ್ ನಡೆಸಿದ ತಂಡಕ್ಕೆ ವರದಾನವಾಗಲಿದೆ. ಏಕೆಂದರೆ ಮಳೆ ಬಂದ ಬಳಿಕ ಈ ಮೈದಾನದಲ್ಲಿ ಚೆಂಡು ಅಷ್ಟಾಗಿ ವೇಗವಾಗಿ ಸಾಗುವುದಿಲ್ಲ ಇದರಿಂದ ಬ್ಯಾಟರ್ಗಳಿಗೆ ರನ್ ಗಳಿಸುವುದು ಕಷ್ಟವಾಗಲಿದೆ ಆದ್ದರಿಂದ ಒಂದು ಕಡೆ ಟಾಸ್ ಮತ್ತು ಮಳೆಯೂ ಕೂಡ ತಂಡದ ಕೈ ಹಿಡಿಯಲಿದೆ. ಜತೆಗೆ ಅದೃಷ್ಟವೂ ಇರಬೇಕು.
ಮಳೆ ಕಾಟ ಇರಲಿದೆ
ಮೆಲ್ಬೋರ್ನ್ನಲ್ಲಿ 2 ದಿನ ಭಾರಿ ಮಳೆಯಾಗಲಿದೆ ಎಂದು ಫೈನಲ್ ಪಂದ್ಯಕ್ಕೂ ಮುನ್ನ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಈ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಭಾನುವಾರದ ಪಂದ್ಯ ಮಳೆಯಿಂದ ರದ್ದಾದರೆ ಮೀಸಲು ದಿನವಾದ ಸೋಮವಾರಕ್ಕೆ ಈ ಪಂದ್ಯವನ್ನು ಮುಂದೂಡಲಾಗುತ್ತದೆ. ಇಲ್ಲಿಯೂ ಮಳೆಯಿಂದ ಪಂದ್ಯ ರದ್ದಾದರೆ ಆಗ ಉಭಯ ತಂಡಗಳನ್ನು ಜಂಟಿ ವಿಜೇತರನ್ನಾಗಿ ಘೋಷಣೆ ಮಾಡಲಾಗುತ್ತದೆ.
ಇದನ್ನೂ ಓದಿ | T20 World Cup | ಫೈನಲ್ ಪಂದ್ಯಕ್ಕೆ ಮೊದಲು ಭಾರತ ಮೂಲದ ಬಾಲಕಿಯಿಂದ ಸಂಗೀತ; ಯಾರೀಕೆ?