ಬೆಂಗಳೂರು: ಈ ಬಾರಿಯ ವಿಶ್ವಕಪ್ನಲ್ಲಿ ಟೂರ್ನಿಯ ಆತಿಥೇಯ ಭಾರತವನ್ನೂ ಕೂಡ ಕಡೆಗಣಿಸಿ ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಮತ್ತೆ ಕಪ್ ಗೆಲ್ಲುವುದು ಖಚಿತ ಎಂದು ಕ್ರಿಕೆಟ್ ಪಂಡಿತರೆಲ್ಲ ನಿರೀಕ್ಷೆ ಮಾಡಿದ್ದರು. ಆದರೆ ಇವರೆಲ್ಲರ ನಿರೀಕ್ಷೆ ಹುಸಿಯಾಗುವ ಹಂತದಲ್ಲಿದೆ. ಆಂಗ್ಲರು ಅತ್ಯಂತ ಹೀನಾಯ ಸೋಲು ಕಾಣುತ್ತಿದ್ದು ಇನ್ನೇನು ಸೆಮಿಫೈನಲ್ ರೇಸ್ನಿಂದ ಹೊರಬೀಳುವ ಸ್ಥಿತಿಯಲ್ಲಿದ್ದಾರೆ. ಇದೀಗ ಗುರುವಾರ ನಡೆಯುವ ಲಂಕಾ(England vs Sri Lanka) ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಈ ಪಂದ್ಯ ಗೆದ್ದರೂ ಬಟ್ಲರ್ ಪಡೆಗೆ ಸೆಮಿ ಹಾದಿ ಸುಗಮಗೊಳ್ಳುವು ಕಷ್ಟ.
ತೀರಾ ಕಳಪೆ ಪ್ರದರ್ಶನ
ವಿಶ್ವದ ಬಲಿಷ್ಠ ಆಟಗಾರರ ಪಡೆಯೇ ಇದ್ದರೂ ಇಂಗ್ಲೆಂಡ್ ತಂಡದ ಪ್ರದರ್ಶನ ನೋಡುವಾಗ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸುವುದಲ್ಲಿ ಅನುಮಾನವೇ ಇಲ್ಲ. ಅಷ್ಟರ ಮಟ್ಟಿಗೆ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ನಾಯಕ ಜಾಸ್ ಬಟ್ಲರ್, ಜಾನಿ ಬೇರ್ ಸ್ಟೋ ನಿವೃತ್ತಿಯಿಂದ ವಾಪಸ್ ಕರೆಸಿದ ಬೆನ್ ಸ್ಟೋಕ್ಸ್, ಆಲ್ ರೌಂಡರ್ ಮೊಯಿನ್ ಅಲಿ ಇವರೆಲ್ಲ ಎರಡಂಕಿ ಮೊತ್ತ ಪೇರಿಸುವಲ್ಲಿ ವಿಫಲಾಗುತ್ತಿದ್ದಾರೆ. ಒಟ್ಟಾರೆಯಾಗಿ ಬ್ಯಾಟಿಂಗ್ ಮರೆತವರಂತೆ ಆಡುತ್ತಿದ್ದಾರೆ. ಇವರೆಲ್ಲ ಸಿಡಿದು ನಿಂತರೆ ಎಂತಹ ತಂಡವನ್ನು ಮಗುಚು ಹಾಕುವ ಸಾಮರ್ಥ್ಯವಿದೆ. ಆದರೆ ಇವರೆಲ್ಲ ಕ್ರಿಕೆಟ್ ಜೋಶ್ ತೋರುತ್ತಿಲ್ಲ.
ಬೌಲಿಂಗ್ ಸಮಸ್ಯೆ
ಲಂಕಾ ತಂಡದಲ್ಲಿರುವ ದೊಡ್ಡ ಸಮಸ್ಯೆ ಎಂದರೆ ಬೌಲಿಂಗ್. ಯಾರೂ ಕೂಡ ಅನುಭವಿ ಬೌಲರ್ಗಳಿಲ್ಲ. ಎಲ್ಲ ಐಪಿಎಲ್ ತಳಿಗಳು. ಇನ್ನು ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಆರಂಭಿಕರು ಮೊದಲ ವಿಕೆಟ್ಗೆ 150 ರನ್ ಜತೆಯಾಟ ನೀಡಿದರು. ಆ ಬಳಿಕದ ಆಟಗಾರರು ನಾಟಕೀಯ ಕುಸಿತ ಕಾಣುತ್ತಿದ್ದಾರೆ. ಒಟ್ಟಾರೆ ಲಂಕಾ ತಂಡದಲ್ಲಿ ಅನುಭವಿ ಆಟಗಾರರು ಇಲ್ಲದೇ ಇರುವುದು ದೊಡ್ಡ ಹೊಡೆತ.
ಅತ್ಯಧಿಕ ತಂಡದ ವಿರುದ್ಧ ಸೋಲಿನ ದಾಖಲೆ
ಕ್ರಿಕೆಟ್-ವಿಶ್ವಕಪ್ ಜನಕರೆಂಬ ಖ್ಯಾತಿಯ ಇಂಗ್ಲೆಂಡ್ ತಂಡ ಅಫಘಾನಿಸ್ತಾನ ವಿರುದ್ಧ ಸೋಲುವ ಮೂಲಕ ಭಾರೀ ಅವ ಮಾನವೊಂದಕ್ಕೆ ತುತ್ತಾಗಿತ್ತು. ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ 11 ತಂಡಗಳ ವಿರುದ್ಧ ಸೋಲನುಭವಿಸಿದ ತಂಡವೆನಿಸಿತ್ತು. ವಿಶ್ವಕಪ್ ಆರಂಭಗೊಂಡ 44 ವರ್ಷಗಳ ಬಳಿಕ ಚಾಂಪಿಯನ್ ಆಗಿ ಮೂಡಿಬಂದ ಇಂಗ್ಲೆಂಡ್ 1975ರ ಚೊಚ್ಚಲ ಕೂಟದಲ್ಲೇ ಸೋಲಿನ ಮುಖ ಕಾಣಲಾರಂಭಿಸಿತ್ತು. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧವಂತೂ ಭಾರಿ ಅಂತರದ ಸೋಲು ಕಂಡಿತ್ತು. ದುರ್ಬಲ ಲಂಕಾ ವಿರುದ್ಧವೂ ಸೋಲು ಕಂಡರೂ ಅಚ್ಚರಿಯಿಲ್ಲ.
ಪಿಚ್ ಪರಿಸ್ಥಿತಿ ಹೇಗಿದೆ?
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟರ್ಗಳಿಗೆ ಸ್ವರ್ಗವಾಗಿದೆ. ಆಟವು ಮುಂದುವರಿದಂತೆ, ಹೊನಲು ಬೆಳಕಿನ ಸಂದರ್ಭದಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಮಾಡಲಿದೆ. ಬೆಂಗಳೂರಿನಲ್ಲಿ ರನ್ ಚೇಸಿಂಗ್ ಸುಲಭವಾಗಿರುವ ಕಾರಣ ದೊಡ್ಡ ಮೊತ್ತದ ರನ್ ಗಳಿಕೆ ಆಗಲಿದೆ.
ಇದನ್ನೂ ಓದಿ Glenn Maxwell: ವಿಸ್ಫೋಟಕ ಬ್ಯಾಟಿಂಗ್ ನಡೆಸಿ ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಗ್ಲೆನ್ ಮ್ಯಾಕ್ಸ್ವೆಲ್
ಸಂಭಾವ್ಯ ತಂಡ
ಶ್ರೀಲಂಕಾ: ಕುಸಲ್ ಪೆರೇರ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್(ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ,, ದುನಿತ್ ವೆಲ್ಲಲಗೆ, ಮಥೀಶ ಪತಿರಣ, ದಿಲ್ಶನ್ ಮಧುಶಂಕ, ಕಸುನ್ ರಜಿತ. ಚಾಮಿಕಾ ಕರುಣಾರತ್ನೆ.
ಇಂಗ್ಲೆಂಡ್: ಜಾನಿ ಬೇರ್ಸ್ಟೋ, ಡೇವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್, ಲಿಯಾಮ್ ಲಿವಿಂಗ್ಸ್ಟೋನ್, ಸ್ಯಾಮ್ ಕರ್ರನ್, ಕ್ರಿಸ್ ವೋಕ್ಸ್ / ಡೇವಿಡ್ ವಿಲ್ಲಿ, ಆದಿಲ್ ರಶೀದ್, ಮಾರ್ಕ್ ವುಡ್, ರೀಸ್ ಟಾಪ್ಲೆ.
ನೇರ ಪ್ರಸಾರದ ವಿವರ
- ಸಮಯ: ಮಧ್ಯಾಹ್ನ 2:00 (ಭಾರತೀಯ ಕಾಲಮಾನ)
- ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್
- ಲೈವ್ ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್