ಲೀಡ್ಸ್: ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲೂ ಪ್ರವಾಸಿ ಆಸ್ಟ್ರೇಲಿಯಾ ತಂಡ ಮುನ್ನಡೆಯ ಹಾದಿಯಲ್ಲಿದೆ. ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್ನಲ್ಲಿ ಪೇರಿಸಿದ್ದ 263 ರನ್ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ 237 ರನ್ಗಳಿಗೆ ಆಲ್ಔಟ್ ಆಗಿದೆ. ಎರಡನೇ ಇನಿಂಗ್ಸ್ ಬ್ಯಾಟಿಂಗ್ ಶುರು ಮಾಡಿರುವ ಆಸೀಸ್ ಬಳಗ ದಿನದಾಟ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 116 ರನ್ ಪೇರಿಸಿದ್ದು. 142 ರನ್ಗಳ ಮುನ್ನಡೆ ಪಡೆದುಕೊಂಡಿದೆ.
Ben’s HEADingley gift 🎁 🏏#Ashes #WhistlePodu 🦁💛 pic.twitter.com/qyRtYZip6C
— Chennai Super Kings (@ChennaiIPL) July 7, 2023
ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೌಲರ್ಗಳು ಪಾರಮ್ಯ ಮೆರೆಯುತ್ತಿದ್ದಾರೆ. ಅಂತೆಯೇ ಎರಡನೇ ದಿನದಾಟದ ಅಂತ್ಯಕ್ಕೆ 24 ವಿಕೆಟ್ಗಳು ಪತನಗೊಂಡಿವೆ. ಮೊದಲ ದಿನದಾಟದ ಅಂತ್ಯಕ್ಕೆ 68 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡದ ಪರಿಸ್ಥಿತಿ ಎರಡನೇ ದಿನದ ಆರಂಭದಲ್ಲಿಯೂ ಉತ್ತಮವಾಗಿರಲಿಲ್ಲ. ಮೊದಲ ದಿನ ಕ್ರೀಸ್ನಲ್ಲಿದ್ದ ಜೋ ರೂಟ್ 19 ರನ್ಗಳಿಗೆ ಔಟಾದರೆ, ಜಾನಿ ಬೈರ್ಸ್ಟೋವ್ 12 ರನ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ : Ashes 2023: ಆ್ಯಶಸ್ ಟೆಸ್ಟ್ ಸರಣಿಯಿಂದ ಹೊರಬಿದ್ದ ನಥಾನ್ ಲಿಯೋನ್
ಸ್ಟೋಕ್ಸ್ ಅರ್ಧ ಶತಕ
ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ (91 ರನ್ಗಳಿಗೆ 6 ವಿಕೆಟ್) ಅವರ ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ಇವೆಲ್ಲದರ ನಡುವೆಯೂ ದಿಟ್ಟ ಹೋರಾಟ ನೀಡಿದ ನಾಯಕ ಬೆನ್ ಸ್ಟೋಕ್ಸ್ 80 ರನ್ ಬಾರಿಸಿ ತಂಡಕ್ಕೆ ಸ್ವಲ್ಪ ಮಟ್ಟಿಗೆ ಆಧಾರವಾದರು. ಉಳಿದಂತೆ ಮೊಯೀನ್ ಅಲಿ 21 ರನ್ ಬಾರಿಸಿದರೆ ಕ್ರಿಸ್ ವೋಕ್ಸ್10 ರನ್ ಕೊಡುಗೆ ಕೊಟ್ಟರು. ಮಾರ್ಕ್ ವುಡ್ 3 ಸಿಕ್ಸರ್ ಸಮೇತ 24 ರನ್ ಬಾರಿಸಿದರು.
ಖ್ವಾಜ ಆಧಾರ
ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಆಧಾರವಾದರು. ಅವರು 96 ಎಸೆತಗಳಿಗೆ 43 ರನ್ ಬಾರಿಸಿದರು. ಆದರೆ, ಡೇವಿಡ್ ವಾರ್ನರ್ 1 ರನ್ಗೆ ಔಟಾಗುವ ಮೂಲಕ ಮತ್ತೆ ವೈಫಲ್ಯ ಎದುರಿಸಿದರು. ಮರ್ನಸ್ ಲಾಬುಶೇನ್ 33 ರನ್ ಗಳಿಸಿದರು. ಸ್ಮಿತ್ 2 ರನ್ಗೆ ಔಟಾದರೆ, ಟ್ರಾವಿಸ್ ಹೆಡ್ (18) ಹಾಗೂ ಮಿಚೆಲ್ ಮಾರ್ಷ್ (17) ಕ್ರೀಸ್ನಲ್ಲಿ ಉಳಿದುಕೊಂಡಿದ್ದಾರೆ. ಇಂಗ್ಲೆಂಡ್ ತಂಡ ಪರ ಮೊಯೀನ್ ಅಲಿ 2 ವಿಕೆಟ್ ಉರುಳಿಸಿದ್ದಾರೆ.