Site icon Vistara News

IND vs ENG: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​

IND vs ENG

ಹೈದರಾಬಾದ್​: ಭಾರತ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದ ಪ್ರವಾಸಿ ಇಂಗ್ಲೆಂಡ್​ ತಂಡ ಬ್ಯಾಟಿಂಗ್​ ಆಯ್ದುಕೊಂಡಿದೆ. ವಿರಾಟ್​ ಕೊಹ್ಲಿ ಬದಲಿಗೆ ಆಯ್ಕೆಯಾದ ರಜತ್​ ಪಾಟಿದಾರ್​ಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಕೆ.ಎಸ್​ ಭರತ್​ ಭಾರತ ತಂಡದ ಕೀಪರ್​ ಆಗಿದ್ದಾರೆ.

ಇಂಗ್ಲೆಂಡ್​ ಒಂದು ದಿನ ಮುಂಚಿತವಾಗಿಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿತ್ತು. ಭಾರತ ಮಾತ್ರ ಟಾಸ್​ ವೇಳೆಯೇ ತನ್ನ ಆಡುವ ಬಳಗವನ್ನು ಪ್ರಕಟಿಸಿ ಮೂವರು ಸ್ಪಿನ್ನರ್​ ಮತ್ತು 2 ವೇಗಿಗಳಿಗೆ ತಂಡದಲ್ಲಿ ಅವಕಾಶ ನೀಡಿದೆ. ಆದರೆ, ಇಂಗ್ಲೆಂಡ್​ ತಂಡದಲ್ಲಿ ಮಾರ್ಕ್ ವುಡ್​ ಏಕೈಕ ವೇಗಿಯಾಗಿದ್ದಾರೆ.

ಭಾರತ ತಂಡ ಇಲ್ಲಿ ಒಮ್ಮೆಯೂ ಸೋತಿಲ್ಲ. ಕಳೆದ ಐದು ವರ್ಷಗಳ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಇದಾಗಿದೆ. ಈ ಹಿಂದೆ ಸ್ಪಿನ್​ ಪಿಚ್ ಆಗಿದ್ದರೂ ಕೂಡ ಪಂದ್ಯ ನಡೆಯದೆ ಹಲವು ವರ್ಷ ಆದ ಕಾರಣದಿಂದ ಈಗ ಪಿಚ್​ ಹೇಗೆ ವರ್ತಿಸುತ್ತದೆ ಎನ್ನುವುದು ಕೂಡ ಮುಖ್ಯವಾಗಿದೆ. ಆದರೂ ಕೂಡ ಉಭಯ ತಂಡಗಳು ಸ್ಪಿನ್​ಗೆ ಹೆಚ್ಚಿನ ಮಹತ್ವ ನೀಡಿದೆ. 

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​​ ಸ್ಟೇಡಿಯಂನಲ್ಲಿ ಇದುವರೆಗೆ ಐದು ಟೆಸ್ಟ್​ ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟಿಂಗ್​ ಮತ್ತು ಬೌಲಿಂಗ್​ ನಡೆಸಿದ ತಂಡಗಳು ತಲಾ 2 ಬಾರಿ ಗೆದ್ದಿವೆ. 404 ರನ್​ ಮೊದಲ ಇನಿಂಗ್ಸ್​ನ ಸರಾಸರಿ ಮೊತ್ತವಾಗಿದೆ. ದ್ವಿತೀಯ ಇನಿಂಗ್ಸ್​ನ ಸರಾಸರಿ ಮೊತ್ತ 377 ರನ್​. ಇಲ್ಲಿ ದಾಖಲಾದ ಗರಿಷ್ಠ ಮೊತ್ತ 687/6. ಇದು ಭಾರತ ಮತ್ತು ಬಾಂಗ್ಲಾ ನಡುವಣ ಪಂದ್ಯದಲ್ಲಿ ದಾಖಲಾಗಿತ್ತು.

ದಾಖಲೆ ಸನಿಹ ಜಡೇಜ


ರವೀಂದ್ರ ಜಡೇಜಾ(Ravindra Jadeja) ಅವರು ಈ ಪಂದ್ಯದಲ್ಲಿ ಕೇವಲ 2 ವಿಕೆಟ್​ ಕಿತ್ತರೆ ವಿಶೇಷ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಸೇರಿ 550ನೇ ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ.

ಸದ್ಯ ಜಡೇಜಾ 548 ಅಂತಾರಾಷ್ಟ್ರೀಯ ವಿಕೆಟ್ ಕಲೆಹಾಕಿದ್ದಾರೆ. ಏಕದಿನದಲ್ಲಿ 220, ಟೆಸ್ಟ್​ನಲ್ಲಿ ​275, ಟಿ20ಯಲ್ಲಿ 53 ವಿಕೆಟ್​ ಕಿತ್ತಿದ್ದಾರೆ. 550 ವಿಕೆಟ್​ ಪೂರ್ತಿಗೊಳಿಸಿದರೆ ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಅನಿಲ್ ಕುಂಬ್ಳೆ, ಕಪಿಲ್ ದೇವ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆರ್. ಅಶ್ವಿನ್ ಮತ್ತು ಜಾವಗಲ್​ ಶ್ರೀನಾಥ್ ಮಾತ್ರ ಈ ಸಾಧನೆ ಮಾಡಿದ್ದಾರೆ.

ಉಭಯ ತಂಡಗಳ ಆಡುವ ಬಳಗ


ಭಾರತ: ರೋಹಿತ್‌ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕೆ.ಎಲ್‌. ರಾಹುಲ್‌, ಕೆ.ಎಸ್‌. ಭರತ್‌, ರವೀಂದ್ರ ಜಡೇಜ, ಆರ್‌. ಅಶ್ವಿ‌ನ್‌, ಅಕ್ಷರ್​ ಪಟೇಲ್​, ಮೊಹಮ್ಮದ್‌ ಸಿರಾಜ್‌, ಜಸ್‌ಪ್ರೀತ್‌ ಬುಮ್ರಾ.

ಇಂಗ್ಲೆಂಡ್‌: ಜಾಕ್‌ ಕ್ರಾಲಿ, ಬೆನ್‌ ಡಕೆಟ್‌, ಓಲೀ ಪೋಪ್‌, ಜೋ ರೂಟ್‌, ಜಾನಿ ಬೇರ್‌ಸ್ಟೊ, ಬೆನ್‌ ಸ್ಟೋಕ್ಸ್‌ (ನಾಯಕ), ಬೆನ್‌ ಫೋಕ್ಸ್‌, ರೇಹಾನ್‌ ಅಹ್ಮದ್‌, ಮಾರ್ಕ್‌ ವುಡ್‌, ಟಾಮ್‌ ಹಾರ್ಟ್ಲಿ, ಜಾಕ್‌ ಲೀಚ್‌.

Exit mobile version