Site icon Vistara News

ICC World Cup 2023 : ಲಂಕಾ ವಿರುದ್ಧ ಸೋತ ಇಂಗ್ಲೆಂಡ್​ ಸೆಮೀಸ್​ ರೇಸ್​​ನಿಂದ ಬಹುತೇಕ ಔಟ್

Srilnaka team

ಬೆಂಗಳೂರು: ಹಾಲಿ ವಿಶ್ವ ಕಪ್​ ಟೂರ್ನಿಯಲ್ಲಿ ಮತ್ತೊಂದು ಹೀನಾಯ ಪ್ರದರ್ಶನ ನೀಡಿದ ಕಳೆದ ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡ ದುರ್ಬಲ ಶ್ರೀಲಂಕಾ ವಿರುದ್ಧ 8 ವಿಕೆಟ್​ಗಳಿಂದ ಹೀನಾಯವಾಗಿ ಸೋತಿದೆ. ಈ ಮೂಲಕ ವಿಶ್ವ ಕಪ್​ನಲ್ಲಿ (ICC World Cup 2023) ಸೆಮಿಫೈನಲ್​ಗೇರುವ ಅವಕಾಶ ಬಹುತೇಕ ಕಳೆದುಕೊಂಡಿದೆ. ಈ ಸೋಲಿನೊಂದಿಗೆ ಆಂಗ್ಲರ ಪಡೆ ಹಾಲಿ ಆವೃತ್ತಿಯಲ್ಲಿ ಒಟ್ಟು 4 ಪಂದ್ಯಗಳ ಸೋಲನ್ನು ಎದುರಿಸಿದಂತಾಗಿದೆ. ಕೇವಲ ಒಂದು ವಿಜಯದ ಮೂಲಕ 2 ಅಂಕಗಳನ್ನು ಸಂಪಾದಿಸಿದೆ. ಇದು ವಿಶ್ವ ಕಪ್ ಆವೃತ್ತಿಯಲ್ಲಿ ಚಾಂಪಿಯನ್​ ತಂಡವೊಂದರ ಅತ್ಯಂತ ಕಳಪೆ ಪ್ರದರ್ಶನವಾಗಿದೆ.

ಇದೇ ವೇಳೆ ಶ್ರೀಲಂಕಾ ತಂಡ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಐದು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸುವ ಮೂಲಕ 4 ಅಂಕ ಸಂಪಾದಿಸುವ ಜತೆಗೆ ನೆಟ್​ರನ್​ರೇಟ್​ (-0.205) ಆಧಾರದಲ್ಲಿ ಪಾಕಿಸ್ತಾನ ತಂಡವನ್ನು ಕೆಳಕ್ಕೆ ತಳ್ಳಿ ಐದನೇ ಸ್ಥಾನ ಪಡೆಯಿತು. ಇದು ಶ್ರೀಲಂಕಾ ತಂಡಕ್ಕೆ ಸತತ ಎರಡನೇ ಗೆಲುವಾಗಿದೆ. ಹಿಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ದ ಜಯ ಸಾಧಿಸಿತ್ತು ಇಂಗ್ಲೆಂಡ್ ತಂಡ 9ನೇ ಸ್ಥಾನಕ್ಕೆ ಜಾರಿತು. ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದರೆ, ನಂತರದ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೆದ್ದಿತ್ತು. ಆ ಬಳಿಕ ಅಫಘಾನಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಇದೀಗ ಶ್ರೀಲಂಕಾ ವಿರುದ್ಧ ಸೋತಿದೆ.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್​ ತಂಡ ಮೊದಲು ಬ್ಯಾಟ್​ ಮಾಡಿ 33.2 ಓವರ್​ಗಳಲ್ಲಿ 156 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಲಂಕಾ ತಂಡ 25.4 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 160 ರನ್​ ಬಾರಿಸಿ ವಿಜಯೋತ್ಸವ ಮಾಡಿತು.

ಸಣ್ಣ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಲಂಕಾ ತಂಡವು ಆರಂಭದಲ್ಲಿ ಸತತವಾಗಿ ಎರಡು ವಿಕೆಟ್​ಗಳನ್ನು ಕಳೆದುಕೊಂಡಿತು. 23 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡ ತಂಡ ಸೋಲಿನ ದವಡೆಗೆ ಸಿಲುಕಿತು. ಆದರೆ, ಆರಂಭಿಕ ಬ್ಯಾಟರ್ ಪಾಥುಮ್ ನಿಸ್ಸಾಂಕ (68) ಹಾಗೂ ಸದೀರಾ ಸಮರವಿಕ್ರಮ (65) ಶತಕದ ಜತೆಯಾಟ ಆಡುವ ಮೂಲಕ ತಂಡವನ್ನು ಗೆಲ್ಲಿಸಿದರು.

ಈ ಸುದ್ದಿಯನ್ನೂ ಓದಿ : Virat kohli : ಕೊಹ್ಲಿ 50ನೇ ಒಡಿಐ ಶತಕ ಬಾರಿಸುವ ದಿನಾಂಕ ತಿಳಿಸಿದ ಗವಾಸ್ಕರ್​

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್ ತಂಡ ಹೀನಾಯ ಬ್ಯಾಟಿಂಗ್​ ಪ್ರದರ್ಶನ ನೀಡಿತು. ಆರಂಭಿಕ ವಿಕೆಟ್​​ಗೆ 45 ರನ್ ಬಾರಿಸಿದರೂ ಬಳಿಕ ಲಂಕಾ ಬೌಲರ್​ಗಳ ಸಂಘಟಿತ ಹೋರಾಟಕ್ಕೆ ವಿಕೆಟ್​ಗಳನ್ನು ಒಪ್ಪಿಸಿದರು. ಜಾನಿ ಬೈರ್​ಸ್ಟೋವ್​ 30 ರನ್ ಹಾಗೂ ಡೇವಿಡ್ ಮಲಾನ್​ 28 ರನ್ ಬಾರಿಸಿ ಉತ್ತಮ ಆರಂಭ ದೊರಕಿಸಿಕೊಟ್ಟರು. ಆದರೆ ಉಳಿದ ಆಟಗಾರರು ಅದನ್ನು ಮುಂದುವರಿಸಲಿಲ್ಲ. ಗಾಯದಿಂದ ಸುಧಾರಿಸಿಕೊಂಡು ಬಂದ ಬೆನ್​ಸ್ಟೋಕ್ಸ್​ 43 ರನ್ ಬಾರಿಸಿ ತಂಡವನ್ನು ಕಾಪಾಡಲು ಯತ್ನಿಸಿದರೂ ಅವರು ಶ್ರಮಕ್ಕೆ ಉಳಿದವರಿಂದ ಬೆಂಬಲ ಸಿಗಲಿಲ್ಲ. ಲಂಕಾ ಪರ ಬೌಲಿಂಗ್​​ನಲ್ಲಿ ಕಸುನ್ ರಜಿತಾ 2 ವಿಕೆಟ್​ ಉರುಳಿಸಿದರೆ, ಏಂಜೆಲೋ ಮ್ಯಾಥ್ಯೂಸ್​ 2 ವಿಕೆಟ್​ ಪಡೆದರು. ಲಾಹಿರು ಕುಮಾರ 3 ವಿಕೆಟ್​ ತಮ್ಮದಾಗಿಸಿಕೊಂಡರು.

ಮುಂದುವರಿದ ಕಳಪೆ ಪ್ರದರ್ಶನ

ಸುಮಾರು 25 ಓವರ್ ಗಳು ಬಾಕಿ ಇರುವಾಗಲೇ ಶ್ರೀಲಂಕಾದಿಂದ ಹೊಡೆತ ತಿಂದಿರುವುದು ಇಂಗ್ಲೆಂಡ್ ಪಾಲಿಗೆ ಇದು ಕೆಟ್ಟ ಕ್ಷಣವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ 229 ರನ್​ಗಳ ಸೋಲನುಭವಿಸಿದ ನಂತರ ಹಾಲಿ ಚಾಂಪಿಯನ್ಸ್ ಲಂಕಾ ವಿರುದ್ಧ ಪುಟಿದೇಳುವ ಭರವಸೆ ಮೂಡಿಸಿತ್ತು. ಅಂತೆಯೇ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಬ್ಯಾಟಿಂಗ್ ವಿಭಾಗ ಮತ್ತೊಮ್ಮೆ ವಿಫಲವಾಯಿತು. ಬ್ಯಾಟರ್​ಗಲ ಸ್ವರ್ಗ ಎನಿಸಿರುವ ಬೆಂಗಳೂರು ಪಿಚ್​ನಲ್ಲಿ 156 ರನ್​ಗಳಿಗೆ ಆಲ್​ಔಟ್ ಆದರು. ಬ್ಯಾಟರ್​ಗಳು ಪೇರಿಸಿದ ಸಣ್ಣ ಮೊತ್ತವನ್ನು ಕಾಪಾಡಿಕೊಳ್ಳುವುದಕ್ಕೆ ತ್ರಿಲಯನ್ಸ್​ ತಂಡದ ಬೌಲರ್​ಗಳಿಗೆ ಸಾಧ್ಯವಾಗಲಿಲ್ಲ.

Exit mobile version