ಬರ್ಮಿಂಗ್‌ಹ್ಯಾಮ್: ಮರುನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ (England Tour) ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ೭ ವಿಕೆಟ್‌ಗಳ ಸೋಲಿಗೆ ಒಳಗಾಗಿದೆ. ಇದೇ ವೇಳೆ ಇಂಗ್ಲೆಂಡ್ ಬಳಗ ೩೭೮ ರನ್‌ಗಳನ್ನು ಚೇಸ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಸಾಧನೆ ಮಾಡಿತು. ೫ ಪಂದ್ಯಗಳ ಟೆಸ್ಟ್ ಸರಣಿ ೨-೨ರಲ್ಲಿ ಸಮಬಲದೊಂದಿಗೆ ಮುಕ್ತಾಯಕಂಡಿದೆ.
ಭಾರತ ನೀಡಿದ್ದ ೩೭೮ ರನ್‌ಗಳ ಗುರಿಯನ್ನು ೭೬.೪ ಓವರ್‌ಗಳಲ್ಲಿ ದಾಟಿದ ಇಂಗ್ಲೆಂಡ್ ತಂಡ ಭರ್ಜರಿ ವಿಜಯ ದಾಖಲಿಸಿತು. ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್ (೧೪೨*) ಹಾಗೂ ಜಾನಿ ಬೈರ್‌ಸ್ಟೋವ್ (೧೧೪*) ಅಜೇಯ ಶತಕಗಳನ್ನು ಬಾರಿಸಿ ಗೆಲುವಿನ ರೂವಾರಿಗಳೆನಿಸಿಕೊಂಡರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ ೨೬೯ ರನ್‌ಗಳ ಮುರಿಯದ ಜತೆಯಾಟ ನೀಡಿತು.
ಇದು ಬೆನ್‌ಸ್ಟೋಕ್ಸ್ ನೇತೃತ್ವದ ಆತಿಥೇಯ ತಂಡಕ್ಕೆ ಸತತ ನಾಲ್ಕನೇ ಟೆಸ್ಟ್ ಜಯವಾಗಿದ್ದು, ಈ ಹಿಂದೆ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ೩ ಪಂದ್ಯಗಳ ಸರಣಿಯನ್ನು ೩-೦ ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿಕೊಂಡಿತ್ತು. ಅತ್ತ ಕಾಯಂ ನಾಯಕ ರೋಹಿತ್ ಶರ್ಮ ಅವರ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾಗೆ ಮೊದಲ ಯತ್ನದಲ್ಲೇ ನಿರಾಸೆ ಎದುರಾಯಿತು.
ಕಮರಿದ ಆಸೆ
ಪಂದ್ಯದ ನಾಲ್ಕನೇ ದಿನವಾದ ಸೋಮವಾರ ೨೫೯ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ ತಂಡ ಮಂಗಳವಾರವೂ ಅದೇ ಲಹರಿಯಲ್ಲಿ ಬ್ಯಾಟಿಂಗ್ ಮಾಡಿತು. ಭಾರತದ ಬೌಲರ್‌ಗಳನ್ನು ಸತತವಾಗಿ ದಂಡಿಸಿದ ರೂಟ್ ಹಾಗೂ ಬೈರ್‌ಸ್ಟೋವ್ ಜೋಡಿ ಇಂಗ್ಲೆಂಡ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.
ಭಾರತ ತಂಡದ ಮೊದಲ ಇನಿಂಗ್ಸ್‌ನಲ್ಲಿ ೪೧೬ ರನ್ ಬಾರಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ ೨೪೫ ರನ್ ಬಾರಿಸಿತು. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ ೨೮೪ ರನ್ ಬಾರಿಸಿದ್ದು, ಎರಡನೇ ಇನಿಂಗ್ಸ್‌ನಲ್ಲಿ ೩ ವಿಕೆಟ್‌ಗೆ ೩೭೮ ರನ್ ಬಾರಿಸುವ ಮೂಲಕ ಸುಲಭ ಜಯ ದಾಖಲಿಸಿತು. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ೧೩೨ ರನ್‌ಗಳ ಮುನ್ನಡೆ ಪಡೆದುಕೊಂಡು ಗೆಲುವಿನ ಅವಕಾಶ ಸೃಷ್ಟಿಮಾಡಿಕೊಂಡಿತ್ತು. ಅದರೆ, ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟರ್‌ಗಳು ವೈಫಲ್ಯಗೊಂಡ ಕಾರಣ ದೊಡ್ಡ ಮೊತ್ತ ನೀಡಲು ಸಾಧ್ಯವಾಗಲಿಲ್ಲ. ಜತೆಗೆ ಭರ್ಜರಿ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ಬ್ಯಾಟರ್‌ಗಳಾದ ಜೋ ರೂಟ್ ಹಾಗೂ ಬೈರ್‌ಸ್ಟೋವ್ ವಿಕೆಟ್ ಕಬಳಿಸಲೂ ಭಾರತದ ಬೌಲರ್‌ಗಳು ವಿಫಲಗೊಂಡರು. ಅದರಲ್ಲೂ ೧೪ ರನ್ ಗಳಿಸಿದ್ದ ಬೈರ್‌ಸ್ಟೋವ್‌ಗೆ ಹನುಮವಿಹಾರಿ ಕ್ಯಾಚ್ ಬಿಟ್ಟು ಜೀವದಾನ ನೀಡಿರುವುದೂ ಎದುರಾಳಿ ತಂಡದ ಸುಲಭ ಗೆಲುವಿಗೆ ಅನುಕೂಲ ಮಾಡಿಕೊಟ್ಟಿತು.
ಟೆಸ್ಟ್ ಸರಣಿಯ ಕಳೆದ ವರ್ಷ ಆರಂಭಗೊಂಡಿತ್ತು. ಆದರೆ, ನಾಲ್ಕು ಪಂದ್ಯಗಳು ಮುಕ್ತಾಯಗೊಂಡ ತಕ್ಷಣ ಭಾರತ ತಂಡದ ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಒಂದು ಪಂದ್ಯ ಮರು ನಿಗದಿಯಾಗಿತ್ತು. ನಾಲ್ಕು ಪಂದ್ಯಗಳಲ್ಲಿ ಭಾರತ ೨-೧ ಅಂತರದ ಮುನ್ನಡೆ ಪಡೆದುಕೊಂಡಿತ್ತು. ಒಂದು ವೇಳೆ ಸರಣಿ ಗೆದ್ದಿದ್ದರೆ ಭಾರತ ತಂಡ ೧೫ ವರ್ಷಗಳ ಬಳಿಕ ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡುತ್ತಿತ್ತು.
ಇದನ್ನೂ ಓದಿ: England tour: ಭಾರತಕ್ಕೆ ಮೊದಲ ಇನಿಂಗ್ಸ್ ಮನ್ನಡೆ