Site icon Vistara News

IND vs ENG: ಸೋಲಿನ ಬೆನ್ನಲ್ಲೇ ಅಬುಧಾಬಿಗೆ ತೆರಳಿದ ಇಂಗ್ಲೆಂಡ್​ ತಂಡ; ಕಾರಣವೇನು?

England to travel back to Abu Dhabi

ಮುಂಬಯಿ: ಭಾರತ ಮತ್ತು ಇಂಗ್ಲೆಂಡ್(IND vs ENG)​ ನಡುವಣ ಮೂರನೇ ಟೆಸ್ಟ್(India vs England 3rd Test)​ ಪಂದ್ಯ ಫೆಬ್ರವರಿ 15ರಿಂದ ಆರಂಭಗೊಳ್ಳಿದೆ. ಈ ಪಂದ್ಯಕ್ಕೆ ಇನ್ನು 9 ದಿನಗಳ ಬಿಡುವು ದೊರೆತಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್​ ತಂಡ ಅಬುಧಾಬಿಗೆ ತೆರಳಿ ಅಲ್ಲೇ ವಿಶ್ರಾಂತಿ ಮತ್ತು ತರಬೇತಿ ಪಡೆಯಲು ನಿರ್ಧರಿಸಿದೆ.

ವಿಶಾಖಪಟ್ಟಣಂನಲ್ಲಿ ನಡೆದ 2ನೇ ಪಂದ್ಯ ನಾಲ್ಕೇ ದಿನಕ್ಕೆ ಮುಕ್ತಾಯ ಕಂಡಿತು. ಪಂದ್ಯ ಮುಗಿದ ತಕ್ಷಣವೇ ಅಂದರೆ ಸೋಮವಾರ ರಾತ್ರಿಯೇ ಇಂಗ್ಲೆಂಡ್​ ಆಟಗಾರರು ಅಬುಧಾಬಿಗೆ ತೆರಳಿದ್ದಾರೆ. ಭಾರತ ಪ್ರವಾಸಕ್ಕೆ ಬರುವ ಮುನ್ನವೂ ಇಂಗ್ಲೆಂಡ್​ ಅಬುಧಾಬಿಯಲ್ಲೇ ತರಬೇತಿ ಶಿಬಿರ ಆಯೋಜಿಸಿತ್ತು. ಇದೀಗ ಮತ್ತೆ ಅಬುಧಾಬಿಗೆ ತರೆಳಿ ಅಲ್ಲೇ ಅಭ್ಯಾಸ ನಡೆಸಲಿದೆ.

ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಇಂಗ್ಲೆಂಡ್ ನಾಲ್ಕನೇ ದಿನದಾಟದಲ್ಲಿ 292 ರನ್‌ಗಳಿಗೆ ಸರ್ವಪತನ ಕಂಡು ಸೋಲಿಗೆ ತುತ್ತಾಯಿತು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 396 ರನ್ ಗಳಿಸಿದ್ದರೆ, ಇಂಗ್ಲೆಂಡ್ 253 ರನ್ ಮಾಡಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತವು 255 ರನ್ ಮಾಡಿದ್ದರೆ ಇಂಗ್ಲೆಂಡ್ ತಂಡವು 292 ರನ್ ಗಳಿಗೆ ಆಲೌಟಾಯಿತು. ಭಾರತದ ಪರ ದ್ವಿತೀಯ ಇನಿಂಗ್ಸ್​ನಲ್ಲಿ ಜಸ್​ಪ್ರೀತ್​ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಮೂರು ವಿಕೆಟ್ ಕಿತ್ತರು. ಉಳಿದಂತೆ ಮುಕೇಶ್ ಕುಮಾರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಮಂಗಳವಾರ ಭಾರತ ತಂಡ ಪ್ರಕಟ ಸಾಧ್ಯತೆ?


ಬಿಸಿಸಿಐ ಆರಂಭಿಕ 2 ಟೆಸ್ಟ್​ಗಳಿಗೆ ಮಾತ್ರ ಭಾರತ ತಂಡವನ್ನು ಪ್ರಕಟಿಸಿತ್ತು. ಇದೀಗ ಉಳಿದಿರುವ ಮೂರು ಪಂದ್ಯಗಳಿಗೆ ಮಂಗಳವಾರ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ವಿರಾಟ್​ ಕೊಹ್ಲಿ ಆಗಮನ ಇನ್ನೂ ಖಚಿತವಾಗಿಲ್ಲ. ಗಾಯಾಳು ಜಡೇಜ ಮತ್ತು ಶಮಿ ಸಂಪೂರ್ಣವಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ Ind vs eng : ರೋಹಿತ್ ಶರ್ಮಾ ಹಿಡಿದ ಈ ಕ್ಯಾಚ್​ಗೆ ಕ್ರಿಕೆಟ್ ಕ್ಷೇತ್ರದ ಮೆಚ್ಚುಗೆ, ಇಲ್ಲಿದೆ ವಿಡಿಯೊ

ಮೊದಲ ಟೆಸ್ಟ್​ನಲ್ಲಿ ಸೋಲು ಕಂಡಿದ್ದ ಭಾರತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) 3ನೇ ಆವೃತ್ತಿಯ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ದ್ವಿತೀಯ ಪಂದ್ಯದಲ್ಲಿ ಗೆಲುವು ಸಾಧಿಸಿದ ಪರಿಣಾಮ ಮತ್ತೆ ದ್ವಿತೀಯ ಸ್ಥಾನಕ್ಕೇರಿದೆ. ಸದ್ಯ ಭಾರತ ಶೇ. 52.77 ಅಂಕ ಹೊಂದಿದೆ. ಶೇ.55 ಅಂಕಹೊಂದಿರುವ ಆಸ್ಟ್ರೆಲಿಯಾ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ದಕ್ಷಿಣ ಆಫ್ರಿಕಾ (ಶೇ.50) ಮತ್ತು ನ್ಯೂಜಿಲ್ಯಾಂಡ್​​ (ಶೇ.50) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ. 2023-25ರ ಐಸಿಸಿ ಡಬ್ಲ್ಯುಟಿಸಿಯಲ್ಲಿ ಭಾರತ ಇದುವರೆಗೆ 6 ಟೆಸ್ಟ್ ಪಂದ್ಯಗಳನ್ನು ಆಡಿದೆ. ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆಲುವು, 2ರಲ್ಲಿ ಸೋಲು ಹಾಗೂ 1ರಲ್ಲಿ ಡ್ರಾ ಸಾಧಿಸಿದೆ. 

Exit mobile version