ಲೀಸೆಸ್ಟರ್ (ಇಂಗ್ಲೆಂಡ್): ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿರುವ (England tour) ಏಕೈಕ ಟೆಸ್ಟ್ ಪಂದ್ಯದ ಪೂರ್ವಭಾವಿಯಾಗಿ ನಡೆಯುತ್ತಿರುವ ನಾಲ್ಕು ದಿನಗಳ ಅಭ್ಯಾಸ ಪಂದ್ಯದಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಭಾರತ ತಂಡ ಇನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಭಾರತ ತಂಡ ಮೊದಲ ಇನಿಂಗ್ಸ್ ಮೊದಲ ಇನಿಂಗ್ಸ್‌ನಲ್ಲಿ ೮ ವಿಕೆಟ್‌ಗೆ ೨೪೬ ರನ್ ಗಳಿಸಿ ಡಿಕ್ಲೇರ್ ಘೋಷಿಸಿದ್ದರೆ, ಲೀಸೆಸ್ಟರ್‌ಶೈರ್ ತಂಡ ಮೊದಲ ಇನಿಂಗ್ಸ್‌ನಲ್ಲಿ ೨೪೪ ರನ್‌ಗಳಿಗೆ ಸರ್ವಪತನ ಕಂಡಿತು. ಮೊಹಮ್ಮದ್ ಶಮಿ (೪೩ ರನ್‌ಗಳಿಗೆ ೨ ವಿಕೆಟ್), ಶಾರ್ದುಲ್ ಠಾಕೂರ್ (೭೧ ರನ್‌ಗಳಿಗೆ ೨ ವಿಕೆಟ್), ಮೊಹಮ್ಮದ್ ಸಿರಾಜ್ (೪೬ ರನ್‌ಗಳಿಗೆ ೨ ವಿಕೆಟ್), ರವೀಂದ್ರ ಜಡೇಜಾ (೨೮ ರನ್‌ಗಳಿಗೆ ೩ ವಿಕೆಟ್) ಅವರ ಸಂಘಟಿತ ಬೌಲಿಂಗ್ ದಾಳಿಗೆ ಬೆಚ್ಚಿದ ಲಿಸೆಸ್ಟರ್ ತಂಡ ಎರಡನೇ ದಿನದ ಆಟ ಮುಗಿಯುವ ಮೊದಲೇ ಅಲ್ಔಟ್ ಆಯಿತು.
ದಿನದಾಟದ ಅಂತ್ಯದ ವೇಳೆ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ತಂಡ ೧೮ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ೮೦ ರನ್ ಬಾರಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಜೇಯ ೭೦ ರನ್ ಬಾರಿಸಿದ್ದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಶ್ರೀಕರ್ ಭರತ್ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕರಾಗಿ ಆಡಲ ಇಳಿದು ೩೧ ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಶುಬ್ಮನ್ ಗಿಲ್ ೩೮ ರನ್‌ಗಳಿಗೆ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಗೆಲುವಿಗಾಗಿ ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಯತ್ನಿಸಲಿದೆ.
ಪಂತ್ ಪರಾಕ್ರಮ
ಅದಕ್ಕಿಂತ ಮೊದಲು ಬ್ಯಾಟ್ ಮಾಡಿದ ಲೀಸೆಸ್ಟರ್‌ಶೈರ್ ತಂಡ ಆರಂಭಿಕ ಕುಸಿತ ಕಂಡಿತು. ಲೂಯಿಸ್ ಕಿಂಬೆರ್ (೩೧), ಸ್ಯಾಮ್ ಎವನ್ಸ್ (೧) ಹಾಗೂ ಚೇತೇಶ್ವರ ಪೂಜಾರ (೦) ವಿಕೆಟ್‌ಗಳು ಬೇಗನೇ ಪತನಗೊಳ್ಳುವ ಮೂಲಕ ಲೀಸೆಸ್ಟರ್ ತಂಡ ಆರಂಭಿಕ ಹಿನ್ನಡೆಗೆ ಒಳಗಾಯಿತು. ಈ ವೇಳೆ ಐದನೆ ಕ್ರಮಾಂಕದಲ್ಲಿ ಆಡಲು ಇಳಿದ ರಿಷಭ್ ಪಂತ್ (೭೬) ಸ್ಫೋಟಕ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಮರ್ಯಾದೆ ಕಾಪಾಡಿದರು. ಜೋಯ್ ಎವಿಸನ್ (೨೨), ರಿಷಿ ಪಟೇಲ್ (೩೪), ರೋಮನ್ ವಾಕರ್ (೩೪) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೂ, ಪ್ರವಾಸಿ ಭಾರತ ತಂಡ ಒಡ್ಡಿರುವ ಗುರಿಯನ್ನು ಮೀರಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ, ರಿಷಭ್ ಪಂತ್ ಅವರು ಫಾರ್ಮ್‌ಗೆ ಮರಳಿರುವುದು ಭಾರತ ತಂಡಕ್ಕೆ ಖುಷಿಯ ವಿಷಯ ಎನಿಸಿದೆ.
ಭರತ್‌ಗೆ ಮಣೆ
ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ ೧೦೦ ಗಳಿಸುವ ಮೊದಲೇ ಪ್ರಮುಖ ೫ ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಶ್ರೀಕರ್ ಭರತ್ ಉತ್ತಮವಾಗಿ ಬ್ಯಾಟ್ ಮಾಡಿ ಸವಾಲಿನ ಮೊತ್ತ ಪೇರಿಸಲು ನೆರವಾಗಿದ್ದರು. ಹೀಗಾಗಿ ಎರಡನೇ ಇನಿಂಗ್ಸ್‌ನಲ್ಲಿ ಅವರನ್ನೇ ಆರಂಭಿಕರಾಗಿ ಕಣಕ್ಕೆ ಇಳಿಸಲಾಯಿತು.
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನಿಂಗ್ಸ್: ೬೦.೨ ಓವರ್‌ಗಳಲ್ಲಿ ೮ ವಿಕೆಟ್‌ಗೆ ೨೪೬ಗೆ ಡಿಕ್ಲೆರ್ಡ್ (ಶ್ರೀಕರ್ ಭರತ್ ಅಜೇಯ ೭೦, ವಿರಾಟ್ ಕೊಹ್ಲಿ ೩೩; ರೋಮನ್ ವಾಕರ್ ೨೪ಕ್ಕೆ೫).
ಲೀಸೆಸ್ಟರ್‌ಶೈರ್ ಮೊದಲ ಇನಿಂಗ್ಸ್: ೫೭ ಓವರ್‌ಗಳಲ್ಲಿ ೨೪೪ (ರಿಷಭ್ ಪಂತ್ ೭೬, ರೋಮನ್ ವಾಕರ್ ೩೪; ಮೊಹಮ್ಮದ್ ಶಮಿ ೪೨ಕ್ಕೆ೩, ರವೀಂದ್ರ ಜಡೇಜಾ ೨೮ಕ್ಕೆ೩).
ಭಾರತ ೨ನೇ ಇನಿಂಗ್ಸ್ : ೧೮ ಓವರ್‌ಗಳಲ್ಲಿ ೧ ವಿಕೆಟ್‌ಗೆ ೮೦ (ಶ್ರೀಕರ್ ಭರತ್ ೩೧, ಶುಬ್ಮನ್ ಗಿಲ್ ೩೮; ನವದೀಪ್ ಸೈನಿ ೧೨ಕ್ಕೆ೧).
ಇದನ್ನೂ ಓದಿ| Team India ಹಿರಿಯ ಬ್ಯಾಟ್ಸ್‌ಮನ್‌ಗಳ ದಂಡು ಯುವ ಬೌಲರ್‌ನ ದಾಳಿಗೆ ಉಡೀಸ್