ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮರು ನಿಗದಿಯಾಗಿರುವ ಐದನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ ಅಲಭ್ಯರಾಗಿರುವ ಕಾರಣ ವೇಗಿ ಜಸ್‌ಪ್ರಿತ್ ಬುಮ್ರಾಗೆ ನಾಯಕತ್ವ ವಹಿಸಲಾಗಿದೆ. ಆದರೆ, ಮೈದಾನದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿಯೇ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದನ್ನು ಕ್ರಿಕೆಟ್ ಅಭಿಮಾನಿಗಳು ಗುರುತಿಸಿದ್ದಾರೆ.
ಬುಮ್ರಾ ಅವರಿಗೆ ನಾಯಕತ್ವ ನೀಡುವ ಮೂಲಕ ಭಾರತ ತಂಡ ೩೫ ವರ್ಷಗಳ ಬಳಿಕ ವೇಗದ ಬೌಲರ್‌ಗೆ ಮುಂದಾಳತ್ವ ನೀಡಿದ ಹಾಗಾಗಿದೆ. ತಾಳ್ಮೆಯ ರೂಪದಂತಿರುವ ಹಾಗೂ ಬೌಲಿಂಗ್‌ನಲ್ಲಿ ಉರಿಚೆಂಡಿನ ದಾಳಿ ನಡೆಸುವ ಬುಮ್ರಾಗೆ ನಾಯಕತ್ವ ನೀಡಿರುವ ಬಗ್ಗೆ ಎಲ್ಲರಿಗೂ ಮೆಚ್ಚುಗೆಯಿದೆ. ಏತನ್ಮಧ್ಯೆ, ಪಂದ್ಯ ಆರಂಭಗೊಂಡ ಬಳಿಕ ವಿರಾಟ್ ಕೊಹ್ಲಿಯೇ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ಫೀಲ್ಡ್ ಸೆಟ್ ಮಾಡುತ್ತಿರುವ ಕೊಹ್ಲಿ
ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆರಂಭಿಸಿದ ಬಳಿಕ ಮೈದಾನದಲ್ಲಿ ಕೊಹ್ಲಿ ಕಾರುಬಾರು ನಡೆಸುತ್ತಿರುವ ವಿಷಯ ಗೊತ್ತಾಗಿದೆ. ಯಾರು ಬೌಲಿಂಗ್ ಮಾಡಬೇಕು, ಇಂಥವರ ಬೌಲಿಂಗ್‌ಗೆ ಯಾರು ಎಲ್ಲಿ ಫೀಲ್ಡ್ ಮಾಡಬೇಕು ಎಂಬುದನ್ನು ಕೊಹ್ಲಿಯೇ ನಿರ್ಧರಿಸುತ್ತಿರುವುದು ನೇರ ಪ್ರಸಾರದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜತೆಗೆ ಪದೇಪದೆ ಬುಮ್ರಾಗೆ ಸಲಹೆ ನೀಡುತ್ತಿರುವ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕ್ರಿಕೆಟ್ ಆಟಗಾರರು ಮೈದಾನಕ್ಕೆ ಇಳಿಯುವ ಮೊದಲು ಎಲ್ಲರೂ ಸುತ್ತುಗಟ್ಟಿ ಗೇಮ್ ಪ್ಲಾನ್ ಅನ್ನು ಚರ್ಚಿತ್ತಾರೆ. ಅಂತೆಯೇ ಭಾರತ ತಂಡ ಮೈದಾನಕ್ಕೆ ಇಳಿಯುವ ಮೊದಲು ಗ್ಲೇಮ್ ಪ್ಲಾನ್ ರೂಪಿಸುವಾಗ ವಿರಾಟ್ ಕೊಹ್ಲಿಯೇ ಸಲಹೆಗಳನ್ನು ನೀಡುತ್ತಿದ್ದರು.
ಇದನ್ನೂ ಓದಿ: ಟೆಸ್ಟ್ ಪಂದ್ಯಕ್ಕೆ covid-19 ಕಾಟ: ವಿರಾಟ್ ಕೊಹ್ಲಿಗೂ ಕೊರೊನಾ