ಬರ್ಮಿಂಗ್‌ಹ್ಯಾಮ್: ಇತ್ತೀಚೆಗೆ ಇಂಗ್ಲೆಂಡ್ ತಂಡ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಏಳು ವಿಕೆಟ್‌ಗಳಿಂದ ಗೆದ್ದಿತ್ತು. ಇಂಗ್ಲೆಂಡ್ ಟೀಮ್ 378 ರನ್‌ಗಳನ್ನು ಚೇಸ್ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಮೊತ್ತದ ಗುರಿ ಬೆನ್ನಟ್ಟಿದ ಸಾಧನೆ ಮಾಡಿತ್ತು. ಈ ಸಂಭ್ರಮವನ್ನು ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಹಾಗೂ ಹಾಲಿ ನಾಯಕ ಬೆನ್ ಸ್ಟೋಕ್ಸ್ ಕಿರು ಬೆರಳೆತ್ತಿ ಸಂಭ್ರಮಿಸಿದ್ದರು. ಇದನ್ನು ಪಿಂಕಿ ಸೆಲೆಬ್ರೇಷನ್ ಅಂತಾರಂತೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನದಂದು ಬೌಲಿಂಗ್ ಮಾಡಿದ ಇಂಗ್ಲೆಂಡ್ ತಂಡವು ಭಾರತವನ್ನು 245 ರನ್‌ಗೆ ಆಲ್‌ಔಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ವೇಳೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮುಷ್ಟಿ ಮಾಡಿ, ಕಿರು ಬೆರಳನ್ನು ಮಾತ್ರ ಮೇಲೆತ್ತಿ ಸಂಭ್ರಮಿಸಿದ್ದಾರೆ. ನಂತರ ಇದೇ ರೀತಿಯಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಜೋ ರೂಟ್ ಕೂಡ ಸಂಭ್ರಮಿಸಿದ್ದಾರೆ.
ಪಿಂಕಿ ಸೆಲೆಬ್ರೇಷನ್ ಎಂದರೇನು?
ಕಿರುಬೆರಳನ್ನು ಮಾತ್ರ ಮುಷ್ಟಿಯಿಂದ ಬಿಡಿಸಿ ಮೇಲಿತ್ತಿ ಮಾಡುವ ಸಂಭ್ರಮಕ್ಕೆ ಪಿಂಕಿ ಸೆಲೆಬ್ರೇಷನ್ ಎಂದು ನಾಮಾಂಕಿತ. ಹಾಲಿವುಡ್‌ನಲ್ಲಿ ಇತ್ತೀಚೆಗೆ ಎಲ್ವಿಸ್ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಸಂಗೀತ ದಿಗ್ಗಜ ಎಲ್ವಿಸ್ ಪ್ರಸ್ಲೆ ಅವರ ಜೀವನಚರಿತ್ರೆಯ ಸಿನಿಮಾ ಇದು. ಈ ಸಿನಿಮಾದಲ್ಲಿ ನಟ ಆಸ್ಟಿನ್ ಬಟ್ಲರ್ ಖ್ಯಾತ ಸಂಗೀತಗಾರ ಎಲ್ವಿಸ್ ಅವರ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಬಾರಿ ಆಸ್ಟಿನ್ ಬಟ್ಲರ್ ಈ ರೀತಿಯ ಕಿರುಬೆರಳನ್ನು ಮೇಲೆತ್ತಿ ಸಂಭ್ರಮಿಸಿದ ದೃಶ್ಯವಿದೆ.
ಇಂಗ್ಲೆಂಡ್ ಕ್ರಿಕೆಟ್‌ತ ತಂಡದ ನಾಯಕ ಬೆನ್ ಸ್ಟೋಕ್ಸ್ ಈ ಸಿನಿಮಾವನ್ನು ಇಷ್ಟಪಟ್ಟು ಅನೇಕ ಬಾರಿ ವೀಕ್ಷಿಸಿದ್ದರಂತೆ. ಎಲ್ಲ ಪ್ರಮುಖ ಟೆಸ್ಟ್ ಪಂದ್ಯಗಳ ಮುನ್ನವೂ ಈ ಸಿನಿಮಾ ನೋಡಿದ್ದರಂತೆ. ಈ ಸಿನಿಮಾದಲ್ಲಿ ಎಲ್ವಿಸ್ ಮಾಡುವ ಸೆಲೆಬ್ರೇಷನ್ ಬೆನ್ ಸ್ಟೋಕ್ಸ್ ಮನಸ್ಸಿನ ಮೇಲೆ ಭಾರಿ ಪ್ರಭಾವ ಬೀರಿದ್ದು, ಅದನ್ನು ಅವರು ಕ್ರಿಕೆಟ್ ಮೈದಾನಕ್ಕೂ ತಂದಿದ್ದಾರೆ.
ಫೀಲ್ಡ್‌ನಲ್ಲಿ ಕಿರುಬೆರಳನ್ನು ಮೇಲೆತ್ತಿ ಸಂಭ್ರಮಿಸಿದ ಬೆನ್ ಸ್ಟೋಕ್ಸ್ ತಂಡದ ಆಟಗಾರರು ʻರಾಕ್‌ಸ್ಟಾರ್ಸ್ʼ ಎಂದು ಹೇಳಿದ್ದಾರೆ. ನಂತರ ಸೆಂಚುರಿ ಬಾರಿಸಿ ಅಬ್ಬರಿಸಿದ ಜೋ ರೂಟ್ ಕೂಡ ಇದೇ ರೀತಿಯಲ್ಲಿ ಸಂಭ್ರಮಿಸಿದ್ದು ಕಂಡುಬಂದಿದೆ.
ಮ್ಯಾಚ್ ಮುಗಿದ ಬಳಿಕ ಜೋ ರೂಟ್‌ಗೆ ಈ ಸಂಭ್ರಮದ ಬಗ್ಗೆ ಕೇಳಿದಾಗ ʻನಾನು ರಾಕ್‌ಸ್ಟಾರ್ ಏನಲ್ಲ ಆದರೆ ಇಂದು ನನಗೆ 10 ಸೆಕೆಂಡುಗಳ ಮಟ್ಟಿಗೆ ರಾಕ್‌ಸ್ಟಾರ್‌ನಂತೆ ಅನಿಸಿದ್ದು ಸುಳ್ಳಲ್ಲ. ಅದಕ್ಕೆ ಕಾರಣ ಪಿಂಕಿʼ ಎಂದು ಹೇಳಿದ್ದಾರೆ.
ಇದನ್ನೂ ಓದಿ Eng vs Ned | 50 ಓವರ್‌ಗಳಲ್ಲಿ 498 ರನ್!ಇಂಗ್ಲೆಂಡ್ ತಂಡದ ವಿಶ್ವ ದಾಖಲೆ!