ಲಂಡನ್: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್(IND vs ENG) ತಂಡ ಹೀನಾಯವಾಗಿ ಸೋಲು ಕಂಡ ಬೆನ್ನಲ್ಲೇ ತಂಡದ ನಾಯಕ ಬೆನ್ ಸ್ಟೋಕ್ಸ್(Ben Stokes) ಮತ್ತು ಕೋಚ್ ಬ್ರೆಂಡನ್ ಮೆಕಲಮ್ ವಿರುದ್ಧ ಮಾಜಿ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ತಂಡ ಅನುಸರಿಸುತ್ತಿರುವ ‘ಬಾಜ್ಬಾಲ್'(Bazball) ತಂತ್ರವನ್ನು ಕೈಬಿಟ್ಟು ನೈಜ ಟೆಸ್ಟ್ ಆಡಬೇಕೆಂದು ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾದ ನಾಸಿರ್ ಹುಸೇನ್ ಮತ್ತು ಮೈಕೆಲ್ ವಾನ್ ಅವರು ಆಕ್ರಮಣಕಾರಿ ಶೈಲಿಯ ಬಾಜ್ಬಾಲ್ ತಂತ್ರವನ್ನು ತಕ್ಷಣ ಕೈಬಿಡಬೇಕು. ಒಂದೇ ಸಿದ್ಧಾಂತದ ಬದಲು ಪಂದ್ಯದ ಸಂದರ್ಭಕ್ಕೆ ತಕ್ಕಂತೆ ಆಟವಾಡುವ ಕಡೆ ಯೋಚಿಸಬೇಕಾದ ಅಗತ್ಯವಿದೆ. ಭಾರತ ತಂಡವನ್ನು ನೋಡಿ ಕಲಿಯಿರಿ ಎಂದು ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ಅವರ ನೇತೃತ್ವದಲ್ಲಿ ಇಂಗ್ಲೆಂಡ್ ಕಂಡ ದಯನೀಯ ಸೋಲು ಇದಾಗಿದೆ. ಅವರ ಕಾರ್ಯತಂತ್ರ ವೈಫಲ್ಯ ಕಂಡದ್ದು ಸೋಲಿಗೆ ಪ್ರಮುಖ ಕಾರಣ. ಪ್ರತಿ ಬಾರಿಯೂ ಆಕ್ರಮಣಕಾರಿ ಆಟ ನಡೆಯುವುದಿಲ್ಲ. ಟೆಸ್ಟ್ನಲ್ಲಿ ಸಂದರ್ಭೋಚಿತವಾಗಿ ಆಡಬೇಕಾಗುತ್ತದೆ ಎಂದು ವಾನ್ ಸ್ಥಳೀಯ ಪತ್ರಿಕೆಯ ಅಂಕಣದಲ್ಲಿ ಬರೆದಿದ್ದಾರೆ.
ಸಮರ್ಥನೆ ನೀಡಿದ ಕೋಚ್
ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕ್ಕಲಕಮ್ ಅವರು ಈ ಎಲ್ಲ ಟೀಕೆಗೆ ಸಮರ್ಥನೆ ನೀಡಿದ್ದಾರೆ. ‘ಬಾಜ್ಬಾಲ್’ ತಂತ್ರವನ್ನು ಸರಣಿಯ ಉಳಿದ ಎರಡು ಪಂದ್ಯಗಳಲ್ಲಿಯೂ ಮುಂದುವರಿಸಲಿದ್ದೇವೆ. ಒಂದು ಪಂದ್ಯ ಸೋತಾಗ ಈ ತಂತ್ರ ವಿಫಲವಾಗಿದೆ ಎನ್ನುವುದು ಸರಿಯಲ್ಲ. ಸೋಲಿನಿಂದ ಆಘಾತವಾಗಿರುವುದು ನಿಜ. ಆದರೆ ಈ ತಂತ್ರವನ್ನು ನಾವು ಕೈಬಿಡುವುದಿಲ್ಲ ಎಂದಿದ್ದಾರೆ.
ನಾಲ್ಕನೇ ಪಂದ್ಯಕ್ಕೆ ಬುಮ್ರಾ ವಿಶ್ರಾಂತಿ
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ(jasprit bumrah) ಆಡುವುದು ಅನುಮಾನ ಎನ್ನಲಾಗಿದೆ. ಅತಿಯಾದ ಕಾರ್ಯದೊತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವರಿಗೆ ಬಿಸಿಸಿಐ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಿದೆ ಎಂದು ವರದಿಯಾಗಿದೆ.
ಆರಂಭಿಕ 2 ಟೆಸ್ಟ್ಗಳಲ್ಲಿ ಒಟ್ಟು 50ಕ್ಕಿಂತ ಅಧಿಕ ಓವರ್ ಬೌಲಿಂಗ್ ನಡೆಸಿದ್ದ ಬುಮ್ರಾಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐ ಬಯಸಿತ್ತು. ಆದರೆ, ರಾಹುಲ್, ಅಯ್ಯರ್, ಶಮಿ, ವಿರಾಟ್ ಈ ಪಂದ್ಯದಿಂದ ಹೊರಬಿದ್ದ ಕಾರಣ ಅನುಭವಿಗಳ ಕೊರತೆಯೊಂದು ಎದ್ದು ಕಂಡು ಬಂತು. ಹೀಗಾಗಿ ಬುಮ್ರಾ ಅವರನ್ನು ಈ ಪಂದ್ಯದಲ್ಲಿ ಆಡಿಸಲಾಗಿತ್ತು. ಇದೀಗ ಸ್ಟಾರ್ ಆಟಗಾರರು ಇಲ್ಲದಿದ್ದರೂ ಮೂರನೇ ಪಂದ್ಯದಲ್ಲಿ ಯುವ ಆಟಗಾರರು ಬೃಹತ್ ಮೊತ್ತದ ಗೆಲುವು ದಾಖಲಿಸಿದ ಪರಿಣಾಮ ಬಿಸಿಸಿಐಗೆ ಮತ್ತು ಆಯ್ಕೆ ಸಮಿತಿಗೆ ಯುವ ಆಟಗಾರರ ಮೇಲೆ ಪೂರ್ಣ ವಿಶ್ವಾಸ ಬಂದಿದೆ. ಹೀಗಾಗಿ ಬುಮ್ರಾಗೆ 4ನೇ ಪಂದ್ಯಕ್ಕೆ ವಿಶ್ರಾಂತಿ ನೀಡುವುದು ಬುಹುತೇಖ ಖಚಿತ ಎನ್ನಲಡ್ಡಿಯಿಲ್ಲ.
ಸಂಪೂರ್ಣ ಫಿಟ್ ಆಗದ ಕಾರಣದಿಂದಾಗಿ ರಾಹುಲ್ ಅವರನ್ನು ಮೂರನೇ ಟೆಸ್ಟ್ನಿಂದ ಕೈಬಿಡಲಾಗಿತ್ತು. ದೇವದತ್ತ ಪಡಿಕ್ಕಲ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಇದೀಗ ರಾಹುಲ್ ಅವರು ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರು 4ನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ರಾಹುಲ್ ಆಗಮನದಿಂದ ರಜತ್ ಪಾಟಿದರ್ ಆಡುವ ಬಳಗದಿಂದ ಬಿಡುಗಡೆಯಾಗಲಿದ್ದಾರೆ. ಏಕೆಂದರೆ ಪಾಟಿದಾರ್ ಆಡಿದ 2 ಟೆಸ್ಟ್ನಲ್ಲಿಯೂ ಕಳಪೆ ಬ್ಯಾಟಿಂಗ್ ನಡೆಸಿದ್ದಾರೆ. ಶೂನ್ಯ ಸುತ್ತಿದ್ದೇ ಹೆಚ್ಚು. ಹೀಗಾಗಿ ರಾಹುಲ್ ಬಂದರೆ ಅವರು ಜಾಗ ಬಿಡಬೇಕಿದೆ. ಒಂದೊಮ್ಮೆ ರಾಹುಲ್ ಆಡದಿದ್ದರೂ ಪಾಟಿದಾರ್ ಬದಲು ಪಡಿಕ್ಕಲ್ಗೆ ಅವಕಾಶ ಸಿಗಬಹುದು.