Site icon Vistara News

IND vs ENG: ಪಾಕ್​ ಮೂಲದ ಬಶೀರ್‌ಗೆ ಕೊನೆಗೂ ಸಿಕ್ಕಿತು ವೀಸಾ; ವಾರಾಂತ್ಯ ಭಾರತಕ್ಕೆ

Shoaib Bashir

ಲಂಡನ್​: ಪಾಕಿಸ್ತಾನ ಮೂಲದ ಇಂಗ್ಲೆಂಡ್‌(IND vs ENG) ತಂಡದ ಸ್ಪಿನ್ನರ್​ ಶೋಯಿಬ್‌ ಬಶೀರ್‌(Shoaib Bashir) ಅವರ ವೀಸಾ ಸಮಸ್ಯೆ ಕೊನೆಗೂ ಬಗೆಹರಿದಿದೆ. ಅವರಿಗೆ ವೀಸಾ ಸಿಕ್ಕಿದ್ದು ಈ ವಾರಾಂತ್ಯ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ ಹೇಳಿದ್ದಾರೆ.

ಭಾರತ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಬಶೀರ್‌ ಅಬುಧಾಬಿಯಲ್ಲಿ ವೀಸಾ ಸಮಸ್ಯೆಯಿಂದಾಗಿ ಭಾರೆತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ತಂಡದ ಎಲ್ಲ ಸದಸ್ಯರು ಜನವರಿ 21ರಂದು ಭಾರತಕ್ಕೆ ಆಗಮಿಸಿದ್ದರು ಕೂಡ ಬಶೀರ್‌ ವೀಸಾ ಸಿಗದ ಕಾರಣ ಮರಳಿ ಲಂಡನ್​ಗೆ ತೆರಳಿದ್ದರು. ಇದೇ ವಿಚಾರವಾಗಿ ಯುಕೆ ಪಿಎಂ ರಿಷಿ ಸುನಕ್ ಅವರು ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಭಾರತದ ವೀಸಾ ಪ್ರಕ್ರಿಯೆಯಲ್ಲಿ ಬ್ರಿಟಿಷ್ ನಾಗರಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆ. ನಾವು ಈ ಪ್ರಕರಣದ ನಿರ್ದಿಷ್ಟತೆಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆದರೆ ನಾವು ಈ ರೀತಿಯ ಸಮಸ್ಯೆಗಳನ್ನು ಈ ಹಿಂದೆಯೇ ಹೈಕಮಿಷನ್‌ ಮುಂದಿಟ್ಟಿದ್ದೇವೆ. ಭಾರತವು ತನ್ನ ವೀಸಾ ಪ್ರಕ್ರಿಯೆಗಳಲ್ಲಿ ಎಲ್ಲ ಸಮಯದಲ್ಲೂ ಬ್ರಿಟಿಷ್ ನಾಗರಿಕರನ್ನು ನ್ಯಾಯಯುತವಾಗಿ ಪರಿಗಣಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಭಾರತದ ವೀಸಾ ಪಡೆಯುವ ವೇಳೆ ಪಾಕಿಸ್ತಾನಿ ಮೂಲದ ಬ್ರಿಟಿಷ್ ನಾಗರಿಕರು ಅನುಭವಿಸಿದ ಸಮಸ್ಯೆಗಳನ್ನು ನಾವು ಈ ಹಿಂದೆಯೇ ಪ್ರಸ್ತಾಪಿಸಿದ್ದೇವೆ. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್ ಬಳಿ ವೀಸಾಗಳಿಗೆ ಅರ್ಜಿ ಸಲ್ಲಿಸಿದ ಅನುಭವದ ಬಗ್ಗೆ ನಾವು ಸಮಸ್ಯೆಗಳನ್ನು ಎತ್ತಿದ್ದೇವೆ ಎಂದು ರಿಷಿ ಸುನಕ್ ವಕ್ತಾರರು ವೀಸಾ ವಿಳಂಬದ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ IND vs ENG: ಕೆಲವೇ ಕ್ಷಣದಲ್ಲಿ ಆರಂಭಗೊಳ್ಳಲಿದೆ ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​

ಈ ಎಲ್ಲ ಬೆಳವಣಿಗೆಯ ಬಳಿಕ ಬಶೀರ್​ಗೆ ವೀಸಾ ಸಿಕ್ಕಿದೆ. ಬಶೀರ್‌ ಅವರ ತಂದೆ-ತಾಯಿ ಪಾಕಿಸ್ತಾನದವರಾದ್ದರಿಂದ ವೀಸಾ ವಿಳಂಬವಾಗಿದೆ ಎನ್ನಲಾಗಿದೆ. ಸದ್ಯ ವೀಸಾ ಪಡೆದಿರುವ ಅವರು ದ್ವಿತೀಯ ಪಂದ್ಯದ ವೇಳೆ ಇಂಗ್ಲೆಂಡ್​ ತಂಡ ಸೇರಲಿದ್ದಾರೆ. ಅವರ ಆಗಮನದಿಂದ ತಂಡದ ಸ್ಪಿನ್ನ್​ ವಿಭಾಗ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಕೋಚ್​ ಮೆಕಲಮ್​ ಮತ್ತು ನಾಯಕ ಸ್ಟೋಕ್ಸ್​ ಹೇಳಿದ್ದಾರೆ.

Exit mobile version