Site icon Vistara News

ENGW vs INDW: ವ್ಯಾಟ್‌-ಬ್ರಂಟ್ ಬ್ಯಾಟಿಂಗ್​ ಆರ್ಭಟಕ್ಕೆ ಮಣಿದ ಭಾರತ ಮಹಿಳಾ ತಂಡ

Nat Sciver-Brunt counter-attacked after early wickets

ಮುಂಬಯಿ: ದೊಡ್ಡ ಮೊತ್ತದ ಟಿ20(India Women vs England Women, 1st T20) ಮೇಲಾಟದಲ್ಲಿ ಭಾರತ ಮಹಿಳಾ ತಂಡ(ENGW vs INDW) ಪ್ರವಾಸಿ ಇಂಗ್ಲೆಂಡ್​ ವಿರುದ್ಧ 38 ರನ್​ಗಳ ಅಂತರದಿಂದ ಸೋಲು ಕಂಡಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಗೆದ್ದ ಇಂಗ್ಲೆಂಡ್​ 1-0 ಮುನ್ನಡೆ ಕಾಯ್ದುಕೊಂಡಿದೆ.

ಇಲ್ಲಿನ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ತಂಡ ಡೇನಿಯಲ್‌ ವ್ಯಾಟ್‌(75) ಮತ್ತು ನ್ಯಾಟ್ ಸ್ಕಿವರ್-ಬ್ರಂಟ್(77) ಅವರ ಅಮೋಘ ಜತೆಯಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ ​6 ವಿಕಟ್​ಗೆ 197 ರನ್​ ಬಾರಿಸಿತು. ಜವಾಬಿತ್ತ ಭಾರತ ತಂಡ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ತನ್ನ ಪಾಲಿನ ಆಟದಲ್ಲಿ 6 ವಿಕೆಟ್​ಗೆ 159 ರನ್​ ಗಳಿಸಿ ಶರಣಾಯಿತು. ಭಾರತ ಪರ ಶಫಾಲಿ ವರ್ಮ ಅವರು (52) ಅರ್ಧಶತಕ ಬಾರಿಸಿ ಮಿಂಚಿದರು.

ಅಮೋಘ ಜತೆಯಾಟವಾಡಿದ ವ್ಯಾಟ್‌-ಬ್ರಂಟ್

ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 2 ರನ್​ ಆಗುವಷ್ಟರಲ್ಲಿ ಮೊದಲ ವಿಕೆಟ್​ ಕಳೆದುಕೊಂಡಿತು. ಇದರ ಬೆನ್ನಲೇ ಮತ್ತುಂದು ವಿಕೆಟ್​ ಕೂಡ ಬಿತ್ತು. 2ರನ್​ಗೆ 2 ವಿಕೆಟ್​ ಕಳೆದುಕೊಂಡ ಇಂಗ್ಲೆಂಡ್​ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಆದರೆ ಮೂರನೇ ವಿಕೆಟ್​ಗೆ ಜತೆಯಾದ ಡೇನಿಯಲ್‌ ವ್ಯಾಟ್‌ ಮತ್ತು ನ್ಯಾಟ್ ಸ್ಕಿವರ್-ಬ್ರಂಟ್ ಸೇರಿಕೊಂಡು ಆಕ್ರಮಣಕಾರಿ ಆಟದ ಮೂಲಕ ತಂಡಕ್ಕೆ ಆಸರೆಯಾದರು.

ಇದನ್ನೂ ಓದಿ Pro Kabaddi: ಗೆಲುವಿನ ನಗೆ ಬೀರಿದ ಪಾಟ್ನಾ ಪೈರೇಟ್ಸ್‌, ಯುಪಿ ಯೋಧಾಸ್

ಈ ಜೋಡಿ ಭಾರತದ ಎಲ್ಲ ಬೌಲಿಂಗ್​ ಯೋಜನೆಯನ್ನು ವಿಫಲಗೊಳಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣವಾಯಿತು. ಇವರ ಬ್ಯಾಟಿಂಗ್​ ಆರ್ಭಟದ ಮುಂದೆ ಆರಂಭಿಕ ಹಂತದಲ್ಲಿ ಹಿಡಿತ ಸಾಧಿಸಿದ್ದ ಭಾರತೀಯ ಬೌಲರ್​ಗಳು ಆ ಬಳಿಕ ಸಂಪೂರ್ಣ ಮಂಕಾದರು. ಓವರ್​ಗೆ ಕನಿಷ್ಠ 10ಕ್ಕಿಂತ ಅಧಿಕ ರನ್​ಗಳನ್ನು ದಂಡಿಸಿಕೊಂಡರು. ಕನ್ನಡತಿ ಶ್ರೇಯಾಂಕ ಪಾಟೀಲ್​ 2 ವಿಕೆಟ್​ ಪಡೆದರೂ 4 ಓವರ್​ಗೆ 44 ರನ್​ ಬಿಟ್ಟುಕೊಟ್ಟು ಅತ್ಯಂರ ದುಬಾರಿ ಎನಿಸಿಕೊಂಡರು. ಅನುಭವಿ ಪೂಜಾ ವಸ್ತ್ರಾಕರ್​ ಕೂಡ 4 ಓವರ್​ಗೆ 44 ರನ್​ ಬಿಟ್ಟುಕೊಟ್ಟರು. ಅಲ್ಲದೆ ಕಳಪೆ ಫೀಲ್ಡಿಂಗ್​ ಮೂಲಕ ಕ್ಯಾಚ್​ ಒಂದನ್ನು ಕೈ ಚೆಲ್ಲಿದರು. ರೇಣುಕಾ ಸಿಂಗ್​​ ಮಾತ್ರ 27 ರನ್​ಗೆ ಮೂರು ವಿಕೆಟ್​ ಪಡೆದು ನಿರೀಕ್ಷಿತ ಮಟ್ಟದ ಬೌಲಿಂಗ್​ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡರು.

ನ್ಯಾಟ್ ಸ್ಕಿವರ್-ಬ್ರಂಟ್ ಸೇರಿಕೊಂಡು ಮೂರನೇ ವಿಕೆಟ್​ಗೆ ಬರೋಬ್ಬರಿ 138 ರನ್​ಗಳ ಜತೆಯಾಟ ನಡೆಸಿದರು. ಡೇನಿಯಲ್‌ ವ್ಯಾಟ್‌ 2 ಸಿಕ್ಸರ್​ ಮತ್ತು 8 ಬೌಂಡರಿ ನೆರವಿಂದ 75 ರನ್​ ಬಾರಿಸಿದರೆ, ನ್ಯಾಟ್ ಸ್ಕಿವರ್-ಬ್ರಂಟ್ 13 ಬೌಂಡರಿ ಸಿಡಿಸಿ 77 ರನ್​ ಗಳಿಸಿದರು. ಉಭಯ ಆಟಗಾರ್ತಿಯರ ವಿಕೆಟ್​ ರೇಣುಕಾ ಸಿಂಗ್​​ ಪಾಲಾಯಿತು. ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಆ್ಯಮಿ ಜೋನ್ಸ್​ ಕೇವಲ 9 ಎಸೆತಗಳಿಂದ 23 ರನ್​ ಬಾರಿಸಿದರು.

ಬ್ಯಾಟಿಂಗ್​ ವೈಫಲ್ಯ ಕಂಡ ಭಾರತ

ಭಾರತ ಪರ ಚೇಸಿಂಗ್​ ವೇಳೆ ಆರಂಭಿಕ ಆಟಗಾರ್ತಿ ಶಫಾಲಿ ವರ್ಮ ಅವರು 52 ರನ್​ ಗಳಿಸಿ ಸೋಲಿನ ಅಂತರವನ್ನು ಕಡಿಮೆಗೊಳಿಸಿದರು. ಸ್ಟಾರ್​ ಆಟಗಾರ್ತಿಯರಾದ ಸ್ಮೃತಿ ಮಂಧಾನ(6) ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್​(4), ರಿಚಾ ಘೋಷ್​(21) ರನ್​ ಗಳಿಸಿ ವೈಫಲ್ಯ ಕಂಡರು. ನಾಯಕಿ ಹರ್ಮನ್​ಪ್ರೀತ್ ಕೌರ್​ ಕೂಡ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಯಶಸ್ಸು ಕಾಣಲಿಲ್ಲ. ಅವರ ಗಳಿಕೆ 26 ರನ್​.​ ಸರಣಿಯ ದ್ವಿತೀಯ ಪಂದ್ಯ ಡಿ.9ರಂದು ನಡೆಯಲಿದೆ.

Exit mobile version