Site icon Vistara News

Team India | ಮಾತನಾಡಿದ್ದು ಸಾಕು, ಆಯ್ಕೆ ಸಮಿತಿ ಸೇರಿಸಿಕೊಳ್ಳಿ; ಆಕಾಶ್‌, ಪಾರ್ಥಿವ್‌ಗೆ ನೆಟ್ಟಿಗರ ಸವಾಲು

TEAM INDIA

ಮುಂಬಯಿ : ಬಿಸಿಸಿಐ ಹಿರಿಯರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಅರ್ಜಿ ಕರೆಯಲಾಗಿದೆ. ಏಷ್ಯಾ ಕಪ್ ಹಾಗೂ ವಿಶ್ವ ಕಪ್‌ನಲ್ಲಿ ಭಾರತ ತಂಡದ ಪ್ರದರ್ಶನ ಸರಿಯಾಗಿರಲಿಲ್ಲ ಎಂಬ ನೆಪವೊಡ್ಡಿ ಚೇತನ್‌ ಶರ್ಮ ಅವರ ನೇತೃತ್ವದ ಆಯ್ಕೆ ಸಮಿತಿಯನ್ನು ಏಕಾಏಕಿ ರದ್ದು ಮಾಡಲಾಗಿದೆ. ಹೊಸ ಸದಸ್ಯರ ನೇಮಕಕ್ಕೆ ಅರ್ಜಿ ಸಲ್ಲಿಸಲು ನವೆಂಬರ್‌ ೨೮ ಕೊನೇ ದಿನವಾಗಿದೆ. ಅರ್ಜಿ ಸಲ್ಲಿಸಲು ಕೆಲವೊಂದು ಮಾನದಂಡಗಳನ್ನು ಹೇಳಲಾಗಿದೆ. ಏತನ್ಮಧ್ಯೆ, ಸರಣಿಗಳು ಹಾಗೂ ಪ್ರಮುಖ ಟೂರ್ನಿಗಳು ನಡೆಯುವ ವೇಳೆ ಟಿವಿಯಲ್ಲಿ ಕುಳಿತು, ಭಾರತ ತಂಡದ ಪ್ರದರ್ಶನವನ್ನು ವಿಶ್ಲೇಷಣೆ ಮಾಡುತ್ತಾ ಕೂರುವ ಕೆಲವು ಮಾಜಿ ಕ್ರಿಕೆಟಿಗರಿಗೆ ನೆಟ್ಟಿಗರು ಟಾಂಗ್‌ ಕೊಟ್ಟಿದ್ದು, ಟಿವಿಯಲ್ಲಿ ಮಾತನಾಡಿದ್ದು ಸಾಕು, ಆಯ್ಕೆ ಸಮಿತಿ ಸೇರಿಕೊಂಡು, ನಿಮ್ಮ ಚಿಂತನೆಗಳನ್ನು ಜಾರಿಗೆ ತನ್ನಿ ಎಂದು ಬರೆದುಕೊಂಡಿದ್ದಾರೆ.

ಪ್ರಮುಖವಾಗಿ ಮಾಜಿ ಬ್ಯಾಟರ್‌ ಆಕಾಶ್‌ ಚೋಪ್ರಾ ಹಾಗೂ ವಿಕೆಟ್‌-ಕೀಪರ್‌ ಬ್ಯಾಟರ್‌ ಪಾರ್ಥಿವ್‌ ಪಟೇಲ್‌ ಅವರಿಗೆ ನೆಟ್ಟಿಗರು ಕಾಲೆಳೆದಿದ್ದಾರೆ.

ಕ್ರಿಕೆಟ್‌ವಾಲಾ ಎಂಬುವರು ಆಕಾಶ್‌ ಚೋಪ್ರಾ ಅವರಿಗೆ ಟ್ವೀಟ್ ಮಾಡಿ, ಆಕಾಶವಾಣಿ ಎಂಬ ಕಾರ್ಯಕ್ರಮದಲ್ಲಿ ನೀವು ತಂಡ ಹೇಗಿರಬೇಕು, ಆಟ ಹೇಗಿರಬೇಕು ಎಂದೆಲ್ಲ ಮಾತನಾಡುತ್ತೀರಿ. ಈಗ ಬಿಸಿಸಿಐ ಆಯ್ಕೆ ಸಮಿತಿಗೆ ಅರ್ಜಿ ಕರೆದಿದೆ. ದಯವಿಟ್ಟ ಅರ್ಜಿ ಹಾಕಿ. ಆಯ್ಕೆ ಸಮಿತಿ ಸೇರಿಕೊಂಡು ನೀವು ಮಾತನಾಡುವುದನ್ನೆಲ್ಲ ಅಲ್ಲಿ ಜಾರಿಗೆ ತನ್ನಿ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಆಕಾಶ್‌, ಈ ಹುದ್ದೆಯನ್ನು ಅಲಂಕರಿಸುವುದು ನನಗೂ ಗೌರವದ ವಿ‍ಷಯ. ಆದರೆ, ಸದ್ಯಕ್ಕೆ ಅಲ್ಲ. ಮುಂದಿನ ದಿನಗಳಲ್ಲಿ ಎಂದು ಬರೆದು ನುಣುಚಿಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್‌ ಅವರಿಗೂ ಅಭಿಮಾನಿಯೊಬ್ಬರು ಇದೇ ರೀತಿ ಕಾಲೆಳೆದಿದ್ದಾರೆ. ದೊಡ್ಡ ಚಿಂತಕ, ಕ್ರಿಕೆಟ್‌ ವಿಮರ್ಶಕ, ದೇಶಿಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಆಟಗಾರ, ಯುವಕ, ಐಪಿಎಲ್‌ ಅನುಭವ ಹಾಗೂ ಆಟಗಾರರ ಸಾಮರ್ಥ್ಯದ ಅರಿವು ಹೊಂದಿರುವ ನೀವು ಯಾಕೆ ಆಯ್ಕೆಗಾರರ ತಂಡ ಸೇರಬಾರದು ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಪಾರ್ಥಿವ್‌, ನನಗೆ ಅಷ್ಟೊಂದು ಅನುಭವ ಇಲ್ಲ ಎಂದು ಬರೆದು ಸುಮ್ಮನಾಗಿದ್ದಾರೆ.

ಇದನ್ನೂ ಓದಿ | BCCI: ಚೇತನ್‌ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಆಯ್ಕೆ ಸಮಿತಿಗೆ ಗೇಟ್​ಪಾಸ್​ ನೀಡಿದ ಬಿಸಿಸಿಐ!

Exit mobile version