ಬರ್ಲಿನ್: ಫುಟ್ಬಾಲ್ ಅಭಿಮಾನಿಗಳ ನಿರೀಕ್ಷೆಯಂತೆ ಈ ಬಾರಿಯ ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ(Euro 2024 final) ಸ್ಪೇನ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಭಾನುವಾರ ತಡರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್(England vs Spain) ತಂಡವನ್ನು 2-1 ಗೋಲುಗಳಿಂದ ಮಣಿಸಿ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
1936ರ ನಿರ್ಮಿಸಲ್ಪಟ್ಟ ಒಲಿಂಪಿಯಾ ಸ್ಟೇಡಿಯಂನಲ್ಲಿ ನಡೆದ ಉಭಯ ತಂಡಗಳ ಪ್ರಶಸ್ತಿ ಕಾದಾಟದಲ್ಲಿ ಸ್ಪೇನ್ ಕೈ ಮೇಲಾಗಿದೆ. 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸಲು ವಿಫಲವಾಗಿರುವ ಇಂಗ್ಲೆಂಡ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಕಳೆದ ಬಾರಿಯೂ ಫೈನಲ್ನಲ್ಲಿ ಮುಗ್ಗರಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.
ಆರು ವರ್ಷಗಳ ಬಳಿಕ ಇತ್ತಂಡಗಳು ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ಪಂದ್ಯ ಇದಾಗಿತ್ತು. 2008 ಹಾಗೂ 2012ರಲ್ಲಿ ಸತತ 2 ಯುರೋ ಕಪ್ ಜಯಿಸಿದ್ದ ಸ್ಪೇನ್, 2010ರಲ್ಲಿ ಫಿಫಾ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ T20 World Cup 2026: ಆತಿಥೇಯ ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ
ಅತ್ಯಂತ ಜಿದ್ದಾಜಿದ್ದಿನಿಂದ ನಡೆದ ಫೈನಲ್ ಪಂದ್ಯದಲ್ಲಿ ಮೊದಲಾರ್ಥದ ಆಟದ ಅವಧಿಯಲ್ಲಿ ಇತ್ತಂಡಗಳಿಂದಲೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಆದರೆ, 47ನೇ ನಿಮಿಷದಲ್ಲಿ ಸ್ಪೇನ್ ಮೊದಲ ಯಶಸ್ಸು ಪಡೆಯಿತು. ಮೊರಾಟಾ ನೀಡಿದ ಅತ್ಯುತ್ತಮ ಪಾಸ್ ಅನ್ನು ನಿಕೋ ವಿಲಿಯಮ್ಸ್ ಗೋಲಾಗಿ ಪರಿವರ್ತಿಸಿದರು. ಇದಾದ ಬಳಿಕ 73ನೇ ನಿಮಿಷದಲ್ಲಿ ಇಂಗ್ಲೆಂಡ್ ಆಟಗಾರ ಕೋಲ್ ಪಾಲ್ಮರ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು.
ಪಂದ್ಯ ತೀವ್ರ ಪೈಪೋಟಿಯಿಂದ ಸಾಗಿತ್ತಿದ್ದಾಗ 86ನೇ ನಿಮಿಷದಲ್ಲಿ ಸ್ಪೇನ್ ತಂಡದ ಮಿಡ್ ಫೀಲ್ಡರ್ ಆಟಗಾರ ಮೈಕೆಲ್ ಒಯರ್ಜಾಬಲ್ ಗೋಲು ಬಾರಿಸಿ ಮಿಂಚಿದರು. 2-1 ಗೋಲು ದಾಖಲಿಸಿದ ಸ್ಪೇನ್ ಆ ಬಳಿಕ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟಿತು. ಇಂಗ್ಲೆಂಡ್ಗೆ ಹಲವು ಗೋಲು ಬಾರಿಸುವ ಅವಕಾಶ ಲಭಿಸಿದರೂ ಕೂಡ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಯಿತು. ಅದರಲ್ಲೂ ಪಂದ್ಯದ 90ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಸುವರ್ಣ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಕೈ ಚೆಲ್ಲಿತು. ಒಂದೊಮ್ಮೆ ಈ ಗೋಲು ಬಾರಿಸಿದರೆ ಶೂಟೌಟ್ನಲ್ಲಿ ಗೆಲ್ಲುವ ಅವಕಾಶ ಇರುತ್ತಿತ್ತು.
ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ಗೆ ಪ್ರವೇಶಿಸಿತ್ತು. ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್(Netherlands) ವಿರುದ್ಧ 2-1 ಗೋಲುಗಳ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತ್ತು.