ಮ್ಯೂನಿಚ್: ಗುರುವಾರ ನಡೆದ ಯುರೋ ಕಪ್(Euro 2024) ಫುಟ್ಬಾಲ್ ಟೂರ್ನಿಯಲ್ಲ ಅತ್ಯಂತ ಜಿದ್ದಾಜಿದ್ದಿನ ಸೆಮಿಫೈನಲ್(Euro 2024 semifinal) ಪಂದ್ಯದಲ್ಲಿ ಕೊನೆಗೂ ಇಂಗ್ಲೆಂಡ್(England) ತಂಡದ ಕೈ ಮೇಲಾಗಿದೆ. ಪಂದ್ಯ ಕೊನೆ ಕ್ಷಣದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದಿದ್ದ ಒಲ್ಲೀ ವ್ಯಾಟ್ಕಿನ್ಸ್(Ollie Watkins) ಗಳಿಸಿದ ಗೋಲಿನ ನೆರವಿನಿಂದ ನೆದರ್ಲೆಂಡ್ಸ್(Netherlands) ವಿರುದ್ಧ 2-1 ಗೋಲುಗಳ ಜಯ ಸಾಧಿಸಿದ ಆಂಗ್ಲರು ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ಭಾನುವಾರ ನಡೆಯುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ತಂಡದ ಸವಾಲು ಎದುರಿಸಲಿದೆ. ಸ್ಪೇನ್ ತಂಡ ಮಂಗಳವಾರ ರಾತ್ರಿ ನಡೆದಿದ್ದ ಫ್ರಾನ್ಸ್ ವಿರುದ್ಧದ ಸೆಮಿ ಪಂದ್ಯದಲ್ಲಿ 2-1 ಅಂತರದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು.
ಅತ್ಯಂತ ರೋಚಕವಾಗಿ ನಡೆದ ಇಂದಿನ ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಗೋಲಿನ ಖಾತೆ ತೆರೆದದ್ದೇ ನೆದರ್ಲೆಂಡ್ಸ್. ಪಂದ್ಯ ಆರಂಭಗೊಂಡ ಏಳನೇ ನಿಮಿಷದಲ್ಲೇ ಗ್ಸಾವಿ ಸೈಮನ್ಸ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆದರೆ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಕೆಲವೇ ಕ್ಷಣಗಳಲ್ಲಿ ಗೋಲು ಬಾರಿಸಿ ಪಂದ್ಯವನ್ನು ಸಮಬಲಕ್ಕೆ ತಂದರು.
1-1ಸಮಬಲ ಸಾಧಿಸಿದ ಬಳಿಕ ಉಭಯ ತಂಡಗಳ ಫಾರ್ವರ್ಡ್ ಆಟಗಾರರು ಗೋಲು ಬಾರಿಸಲು ಎಷ್ಟೇ ಪ್ರಯತ್ನಪಟ್ಟರೂ ಕೂಡ ಡಿಫೆಂಡರ್ಗಳ ರಕ್ಷಣಾ ಕೋಟೆಯನ್ನು ಭೇದಿಸುವಲ್ಲಿ ವಿಫಲರಾದ ಕಾರಣ ಗೋಲು ದಾಖಲಾಗಲಿಲ್ಲ. ಇನ್ನೇನು ಪಂದ್ಯದ ಅವಧಿ ವಿಸ್ತರಿಸಬೇಕಾಗುತ್ತದೆ ಎಂಬ ಹಂತದಲ್ಲಿ ಬದಲಿಯಾಗಿ ಆಡಲಿಳಿದ ವ್ಯಾಟ್ಕಿನ್ಸ್ 91ನೇ ನಿಮಿಷದಲ್ಲಿ ಮಿಂಚಿನ ವೇಗದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿ ಡಚ್ಚರ ಫೈನಲ್ ಕನಸಿಗೆ ಕೊಳ್ಳಿ ಇಟ್ಟರು.
ಕೋಲ್ ಪಾಲ್ಮರ್ ಅವರ ಉತ್ತಮ ಪಾಸ್ ಅನ್ನು ಯಾವುದೇ ತಪ್ಪುಗಳು ಮಾಡದಂತೆ ವಾಟ್ಕಿನ್ಸ್ ಅದ್ಭುತವಾಗಿ ಗೋಲು ಬಾರಿಸಿ ಇಂಗ್ಲೆಂಡ್ ಪಾಲಿನ ಗೆಲುವಿನ ಹೀರೋ ಎನಿಸಿಕೊಂಡರು. ಫೈನಲ್ ಪಂದ್ಯದಲ್ಲಿ ಇವರು ಪೂರ್ಣ ಪ್ರಮಾಣದಲ್ಲಿ ಆಡುವ ಸಾಧ್ಯತೆ ಇದೆ. ಕೋಚ್ ಗ್ಯಾರೆತ್ ಸೌತ್ಗೇಟ್ ಅವರು ವಾಟ್ಕಿನ್ಸ್ ಆಡಿಸುವ ನಿರ್ಧಾರ ಮಾಡದೇ ಇದ್ದಿದ್ದರೆ ಇಂಗ್ಲೆಂಡ್ ಸೋಲುವ ಸಾಧ್ಯತೆಯೂ ಇರುತ್ತಿತ್ತು.
ಇದನ್ನೂ ಓದಿ Euro 2024 : ಫ್ರಾನ್ಸ್ ತಂಡವನ್ನು ಸೋಲಿಸಿ ಯೂರೊ ಕಪ್ ಫೈನಲ್ ತಲುಪಿದ ಸ್ಪೇನ್
ಅಜೇಯವಾಗಿ ಫೈನಲ್ ತಲುಪಿರುವ ಸ್ಪೇನ್, ದಾಖಲೆಯ 4ನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಪ್ರಶಸ್ತಿ ಫೇವರಿಟ್ ಎನಿಸಿರುವ ಸ್ಪೇನ್ ತಂಡದ ಆಟವನ್ನು ನೋಡುವಾಗ ಫೈನಲ್ಗೂ ಮುನ್ನವೇ ಸ್ಪೇನ್ ಪ್ರಶಸ್ತಿ ಗೆಲ್ಲುವುದು ಖಚಿತ ಎಂದು ಆತ್ಮವಿಶ್ವಾಸದಿಂದಲೇ ಹೇಳಬಹುದು.
ಇದೇ ಪಂದ್ಯದಲ್ಲಿ ಗೋಲು ಬಾರಿಸಿದ ಲ್ಯಾಮಿನ್ ಯಮಲ್ (16 ವರ್ಷ, 362 ದಿನ) ಯುರೋಕಪ್-ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಗೋಲು ಸಿಡಿಸಿದ ಕಿರಿಯ ಆಟಗಾರ ಎನಿಸಿದರು. ಬ್ರೆಜಿಲ್‌ನ ದಂತಕಥೆ ಪೀಲೆ (17 ವರ್ಷ, 239 ದಿನ) ಸಾಧನೆ ಮುರಿದರು.