ಬರ್ಲಿನ್: ಶನಿವಾರ ರಾತ್ರಿ ನಡೆದ ಯುರೋ ಕಪ್(Euro 2024) ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಸ್ಪೇನ್(Spain) ತಂಡ ಕ್ರೊವೇಷಿಯಾವನ್ನು(Croatia) 3-0 ಗೋಲ್ಗಳಿಂದ ಮಣಿಸಿದೆ. ಬರ್ಲಿನ್ನಲ್ಲಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಸ್ಪೇನ್ ಪರ ಅಲ್ವೆರೊ ಮೊರಾಟ (29ನೇ ನಿಮಿಷ), ಫ್ಯಾಬಿಯಾನ್ ರುಯೆಜ್ (32ನೇ ನಿಮಿಷ), ಡ್ಯಾನಿ ಕಾರ್ವಜಲ್ (45+22ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಇವರ ಆರ್ಭಟದ ಮುಂದೆ ಕ್ರೊವೇಷಿಯಾಕ್ಕೆ ಕನಿಷ್ಠ ಒಂದು ಗೋಲು ಬಾರಿಸಲು ಸಾಧ್ಯವಾಗಲಿಲ್ಲ.
ಮೊದಲ ಅವಧಿಯಲ್ಲೇ ಮುನ್ನಡೆ ಸಾಧಿಸಿದ ಸ್ಪೇನ್ ಪಂದ್ಯದುದಕ್ಕೂ ಮೇಲುಗೈ ಸಾಧಿಸಿತು. ಎರಡನೇ ಅವಧಿಯಲ್ಲಿ ಎಚ್ಚೆತ್ತ ಕ್ರೊವೇಷಿಯಾ ಗೋಲು ಗಳಿಸಲು ಶತ ಪ್ರಯತ್ನ ಪಟ್ಟರೂ ಕೂಡ ಸ್ಪೇನ್ ರಕ್ಷಣಾ ಕೋಟೆಯನ್ನು ಭೀದಿಸುವಲ್ಲಿ ಯಶಸ್ಸು ಕಾಣಲಿಲ್ಲ. ಖ್ಯಾತ ರಿಯಲ್ ಮ್ಯಾಡ್ರಿಡ್ ತಂಡದ ಮಿಡ್‌ಫೀಲ್ಡರ್ ಮಾಡ್ರಿಕ್, ಮಾಟಿಯೊ ಕೊವಾಸಿಕ್ ಮತ್ತು ಮಾರ್ಸೆಲೊ ಬ್ರಾಝೊವಿಕ್ ಅವರನ್ನೊಳಗೊಂಡ ಕ್ರೊವೇಷಿಯಾ ಒಂದೂ ಗೋಲು ಬಾರಿಸಲಾಗದೆ ಹೀನಾಯ ಸೋಲು ಕಂಡಿತು. ಈ ಗೆಲುವಿನೊಂದಿಗೆ ಸ್ಪೇನ್ ತಂಡ ಮತ್ತೆ ಕ್ರೊವೇಷಿಯಾ ವಿರುದ್ಧ ತನ್ನ ಪ್ರಾಬಲ್ಯ ಮುಂದುವರಿಸಿದೆ. ಯುರೋ 2020ರ ಕೂಟದ 16ರ ಘಟ್ಟದ ಪಂದ್ಯದಲ್ಲಿ ಸ್ಪೇನ್ ಹೆಚ್ಚುವರಿ ಅವಧಿಯ ಆಟದಲ್ಲಿ ಕ್ರೊವೇಷಿಯಾ ಮೇಲೆ ಜಯಗಳಿಸಿತ್ತು.
ದಿನದ ಮತ್ತೊಂದು(euro cup) ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ಕೂಡ ಹಂಗೇರಿ ವಿರುದ್ಧ 3-1 ಗೋಲು ಅಂತರದಿಂದ ಗೆದ್ದು ತನ್ನ ಅಭಿಯಾನವನ್ನು ಪ್ರಾರಂಭಿಸಿದೆ. ಸದ್ಯ ‘ಎ’ ವಿಭಾಗದಲ್ಲಿರು ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದೆ.
ಇದನ್ನೂ ಓದಿ Euro 2024 : ಸ್ಕಾಟ್ಲೆಂಡ್ ವಿರುದ್ಧ ಜರ್ಮನಿಗೆ 5-1 ಗೋಲ್ಗಳ ಭರ್ಜರಿ ವಿಜಯ
ಇಂದು(ಭಾನುವಾರ) ನಡೆದ ಬಿ ಗ್ರೂಪ್ನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಟಲಿ ತಂಡ ಅಲ್ಬೇನಿಯಾ ವಿರುದ್ಧ 2-1 ಅಂತರದಿಂದ ಗೆದ್ದು ಯುರೋ 2024 ಅಭಿಯಾನವನ್ನು ಪ್ರಾರಂಭಿಸಿತು. ಅಲ್ಬೇನಿಯಾದ ನೆದಿಮ್ ಬಜ್ರ್ಮಿ ಇಟಲಿ ವಿರುದ್ಧದ ಘರ್ಷಣೆಯಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತ್ಯಂತ ವೇಗದ ಗೋಲು ಗಳಿಸಿದರು. 2004 ರಂದು ಗ್ರೀಸ್ ವಿರುದ್ಧ 65 ಸೆಕೆಂಡುಗಳ ನಂತರ ಗೋಲು ಗಳಿಸಿದ ರಷ್ಯಾದ ಡಿಮಿಟ್ರಿ ಕಿರಿಚೆಂಕೊ ಅವರ ಹಿಂದಿನ ದಾಖಲೆಯನ್ನು ಮುರಿದರು.