ನವ ದೆಹಲಿ : ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat kohli) ಅಫಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್-೪ ಹಣಾಹಣಿಯಲ್ಲಿ ಶತಕ ಬಾರಿಸಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಅಜೇಯ ೧೨೨ ರನ್ ಬಾರಿಸಿರುವ ಅವರು ತಮ್ಮ ಟೀಕಾಕಾರಿಗೆ ಉತ್ತರ ಕೊಟ್ಟಿದ್ದಾರೆ. ಆದರೆ, ಕೊಹ್ಲಿಯನ್ನು ಟೀಕಿಸುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು, ಇನ್ನೂ ಕೊಹ್ಲಿಯ ಪ್ರದರ್ಶನದ ಬಗ್ಗೆ ಪ್ರಶ್ನೆ ಕೇಳುವುದನ್ನು ಬಿಟ್ಟಿಲ್ಲ. ಸ್ಟಾರ್ ಸ್ಪೋರ್ಟ್ಸ್‌ನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಕೊಹ್ಲಿಯಾಗಿದ್ದಕ್ಕೆ ಪ್ರದರ್ಶನದ ಹೊರತಾಗಿಯೂ ಮೂರು ವರ್ಷಗಳ ಅವಕಾಶ ಪಡೆದುಕೊಂಡರು. ಬೇರೆಯವರು ಆಗಿದ್ದರೆ ಈ ಶತಕ ಬಾರಿಸಲು ಅವಕಾಶವೇ ಪಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಕೊನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದು ೨೦೧೯ರ ನವೆಂಬರ್ ೨೩ರಂದು. ೧೦೨೦ ದಿನಗಳ ಬಳಿಕ ಶತಕ ಬಾರಿಸಿ ೭೧ನೇ ಅಂತಾರಾಷ್ಟ್ರೀಯ ಶತಕವನ್ನು ಬಾರಿಸಿದ್ದಾರೆ. ಸುಮಾರು ೮೩ ಇನಿಂಗ್ಸ್‌ಗಳಲ್ಲಿ ಅವರು ಮೂರಂಕಿ ಮೊತ್ತ ತಲುಪಲು ವಿಫಲಗೊಂಡಿದ್ದರು.
ಈ ಕುರಿತು ಮಾತನಾಡಿದ ಗಂಭೀರ್ “ಮೂರು ವರ್ಷಗಳ ಕಾಲ ಯಾವುದೇ ಬ್ಯಾಟರ್ ಕನಿಷ್ಠ ಒಂದು ಶತಕ ಬಾರಿಸದೇ ತಂಡದಲ್ಲಿ ಉಳಿಯವುದು ಕಷ್ಟ. ವಿರಾಟ್ ಕೊಹ್ಲಿ ಹಿಂದೆ ಸಾಕಷ್ಟು ರನ್‌ಗಳನ್ನು ಪೇರಿಸಿದ್ದ ಕಾರಣ, ತಂಡದಲ್ಲಿ ಉಳಿಯಲು ಸಾಧ್ಯವಾಯಿತು. ರೋಹಿತ್ ಶರ್ಮ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಕೆ.ಎಲ್. ರಾಹುಲ್ ಈ ರೀತಿಯಾಗಿ ಆಡಿದ್ದರೆ ಅವರು ತಂಡದಲ್ಲಿಯೇ ಇರುತ್ತಿರಲಿಲ್ಲ ಎಂದು ಗಂಭೀರ್ ಹೇಳಿದ್ದಾರೆ.
“ಮೂರು ವರ್ಷ ಅವಕಾಶ ನೀಡುವುದು ದೀರ್ಘವಾಯಿತು. ನಾನು ಅವರನ್ನು ಟೀಕಿಸಲು ಯತ್ನಿಸುತ್ತಿಲ್ಲ. ಹಿಂದೆ ರನ್ ಗಳಿಸಿದ್ದ ಕಾರಣ ಅವರಿಗೆ ಅದು ಸಾಧ್ಯವಾಗಿದೆ. ಆದರೆ, ಯುವ ಬ್ಯಾಟರ್‌ಗಳಿಗೆ ಇಷ್ಟೊಂದು ಅವಕಾಶ ಸಿಗುತ್ತದೆ ಎಂದು ನಾನು ಅಂದುಕೊಳ್ಳುವುದಿಲ್ಲ,” ಎಂದು ಗಂಭೀರ್ ನುಡಿದಿದ್ದಾರೆ.
“ವಿಶ್ವ ಕಪ್‌ಗೆ ತಂಡ ರಚಿಸುವ ಮೊದಲು ಅವರು ಶತಕ ಬಾರಿಸಿದ್ದು ಸಂತಸದ ವಿಷಯ. ಆದರೆ, ಬೇರೆಯವರಿಗೆ ಇದೇ ಮಾನದಂಡವನ್ನು ಪ್ರಯೋಗಿಸುತ್ತಿರಲಿಲ್ಲ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ | Virat kohli | ವಿರಾಟ್ ಕೊಹ್ಲಿಗೆ ಸ್ಮರಣೀಯವಾಗಲಿದೆ ದುಬೈ ಪಿಚ್, ಇಲ್ಲಿದೆ ನೋಡಿ ಕಾರಣಗಳು