ಮುಂಬಯಿ: ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ (WPL 2023) ಬುಧವಾರ (ಮಾರ್ಚ್8ರಂದು) ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡವನ್ನು ಸೋಲಿನ ಸಂಭ್ರಮದಲ್ಲಿರುವ ಗುಜರಾತ್ ಜಯಂಟ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಫೋಟಕ ಬ್ಯಾಟರ್ ಹಾಗೂ ನಾಯಕಿ ಬೆತ್ ಮೂನಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಕ್ಕೆ ನಡೆದಿದ್ದಾರೆ. ಅವರಿಗೆ ಆಗಿರುವ ನೋವು ನಿವಾರಣೆಗೆ ಆರು ವಾರಗಳ ವಿಶ್ರಾಂತಿ ಸೂಚಿಸಿರುವ ಕಾರಣ ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುತ್ತಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.
ಬೆತ್ ಮೂನಿ ಸ್ಫೋಟಕ ಬ್ಯಾಟರ್. ಅವರನ್ನು 2 ಕೋಟಿ ರೂಪಾಯಿಗೆ ಗುಜರಾತ್ ಜಯಂಟ್ಸ್ ತಂಡ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಆದರೆ, ಮುಂಬಯಿ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದ ವೇಳೆ ಅವರು ಮಂಡಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅರ್ಧದಿಂದಲೇ ಮೈದಾನ ತೊರೆದಿದ್ದರು. ಇದೀಗ ಅವರು ಸಂಪೂರ್ಣವಾಗಿ ಹೊರಗುಳಿಯುವಂತಾಗಿದೆ.
ಬೆತ್ ಮೂನಿ ಅವರ ಜಾಗಕ್ಕೆ ಸ್ನೇಹಾ ರಾಣ ಅವರನ್ನು ಆಯ್ಕೆ ಮಾಡಲಾಗಿದೆ. ಆರ್ಸಿಬಿ ಹಾಗೂ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಸ್ನೇಹಾ ಅವರ ತಂಡವನ್ನು ಮುನ್ನಡೆಸಿದ್ದರು. ಇದೀಗ ಕಾಯಂ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ : WPL 2023 : ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ತಂಡದಿಂದ ಬ್ಯಾಟಿಂಗ್ ಆಯ್ಕೆ
ಗುಜರಾತ್ ಜಯಂಟ್ಸ್ ತಂಡದ ಪರವಾಗಿ ಟೂರ್ನಿಯಲ್ಲಿ ಆಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ, ಗಾಯ ಎಂಬುದು ಕ್ರೀಡಾ ಕೂಟದ ಅವಿಭಾಜ್ಯ ಅಂಗವಾಗಿದೆ. ಅದರಂತೆ ಗಾಯದ ಸಮಸ್ಯೆಗೆ ಒಳಗಾಗಿದ್ದು ತಂಡದಿಂದ ಹೊರಕ್ಕೆ ಉಳಿಯುಂತಾಯಿತು ಎಂದು ಬೆತ್ ಮೂನಿ ಹೇಳಿದ್ದಾರೆ.