ದುಬೈ : ಏಷ್ಯಾ ಕಪ್ ಟೂರ್ನಿಯಲ್ಲಿ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿರುವ ಭಾರತ ತಂಡ, ಸೂಪರ್-೪ ಹಂತದ ಕೊನೇ ಪಂದ್ಯದಲ್ಲಿ ಗುರುವಾರ (ಸೆಪ್ಟೆಂಬರ್ ೮) ಅಫಘಾನಿಸ್ತಾನ ತಂಡಕ್ಕೆ (IND vs AFGHAN) ಎದುರಾಗಲಿದೆ. ಅತ್ತ ಆಫ್ಘನ್ ಬಳಗವೂ ಪಾಕಿಸ್ತಾನ ವಿರುದ್ಧ ವೀರೋಚಿತ ಸೋಲು ಕಂಡಿರುವ ಕಾರಣ ಆ ತಂಡವೂ ಫೈನಲ್ ಅವಕಾಶ ಕಳೆದುಕೊಂಡಿದೆ. ಹೀಗಾಗಿ ಈ ಹಣಾಹಣಿ ಉಭಯ ತಂಡಗಳಿಗೆ ಅನೌಪಚಾರಿಕ ಎನಿಸಿಕೊಳ್ಳಲಿದೆ.
ಸೂಪರ್-೪ ಹಂತದ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋಲು ಕಂಡಿದ್ದ ರೋಹಿತ್ ಬಳಗ, ನಂತರದ ಎದುರಾಳಿ ಶ್ರೀಲಂಕಾ ವಿರುದ್ಧವೂ ಪರಾಜಯಗೊಂಡಿತ್ತು. ಹೀಗಾಗಿ ಫೈನಲ್ ಅವಕಾಶ ನಷ್ಟ ಮಾಡಿಕೊಂಡಿದೆ ಏಳು ಬಾರಿಯ ಚಾಂಪಿಯನ್ ತಂಡ ಭಾರತ. ಕಳೆದ ಕೆಲವು ಸಮಯಗಳಿಂದ ಸೀಮಿತ ಓವರ್‌ಗಳ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಹಾಗೂ ಮುಂಬರುವ ಟಿ೨೦ ವಿಶ್ವ ಕಪ್‌ಗೆ ಸಜ್ಜಾಗುತ್ತಿದ್ದ ಟೀಮ್ ಇಂಡಿಯಾಗೆ ಇದರಿಂದ ಹಿನ್ನಡೆ ಉಂಟಾಗಿದೆ. ಹೀಗಾಗಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಜತೆಗೆ ಚೇತರಿಕೆ ಕಂಡುಕೊಳ್ಳಬೇಕಾಗಿದೆ.
ಬದಲಾವಣೆ
ಈ ಹಿಂದಿನ ಪಂದ್ಯಗಳ ಪ್ರದರ್ಶನದ ಆಧಾರದಲ್ಲಿ ಟೀಮ್ ಇಂಡಿಯಾದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಪ್ರಮುಖವಾಗಿ ಅರಂಭಿಕ ಬ್ಯಾಟರ್ ಕೆ. ಎಲ್. ರಾಹುಲ್ ಅವರನ್ನು ಬೆಂಚು ಕಾಯಿಸಿ, ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡಬಹುದು. ಸ್ಪಿನ್ನರ್ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯಲಿದ್ದು, ಅವರಿಗೆ ಯಜ್ವೇಂದ್ರ ಸ್ಥಾನ ಬಿಟ್ಟುಕೊಡಬೇಕಾಗಹುದು. ಅಂತೆಯೇ ದೀಪಕ್ ಚಾಹರ್ ಅವಕಾಶ ಪಡೆದರೆ ಭುವನೇಶ್ವರ್ ಕುಮಾರ್ ಅಥವಾ ಅರ್ಶ್‌ದೀಪ್ ಸಿಂಗ್ ಚಾನ್ಸ್ ಕೊಡಬೇಕಾಗುತ್ತದೆ.
ಅಫಘಾನಿಸ್ತಾನ ತಂಡಕ್ಕೆ ಬೌಲರ್‌ಗಳೇ ಆಧಾರ. ಮುಜೀಬ್ ಉರ್ ರಹ್ಮಾನ್ ಹಾಗೂ ರಶೀದ್ ಖಾನ್ ಬೌಲಿಂಗ್‌ನಲ್ಲಿ ಪ್ರಭಾವಿಗಳು. ಹಜರುತುಲ್ಲಾ ಜಜೈ, ರಹಮನುಲ್ಲಾ ಗುರ್ಜಬ್ ಉತ್ತಮ ಫಾರ್ಮ್‌ನಲ್ಲಿದ್ದು ಎದುರಾಳಿ ಬೌಲರ್‌ಗಳನ್ನು ಬೆದರಿಸಬಲ್ಲರು. ಸೀಮಿತ ಓವರ್‌ಗಳ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಬಲಿಷ್ಠವಾಗಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಗಳಿವೆ.
ಪಿಚ್ ಹೇಗಿದೆ
ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಪಂದ್ಯ ನಡೆಯಲಿದೆ. ಇದುವರೆಗಿನ ಪಂದ್ಯಗಳ ಫಲಿತಾಂಶವನ್ನು ಅವಲೋಕಿಸಿದರೆ ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಲಾಗಿದೆ. ಆರಂಭದಲ್ಲಿ ಬೌಲರ್‌ಗಳಿಗೆ ನೆರವಾಗಿ ಎರಡನೆ ಇನಿಂಗ್ಸ್‌ನಲ್ಲಿ ಬ್ಯಾಟರ್‌ಗಳಿಗೆ ಒಲಿಯುತ್ತದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಅನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ (ನಾಯಕ), ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್‌ಕೀಪರ್), ದೀಪಕ್ ಹೂಡ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಆರ್. ಅಶ್ವಿನ್
ಅಫಘಾನಿಸ್ತಾನ : ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಜಜೈ, ರಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ನಜೀಬುಲ್ಲಾ ಜದ್ರಾನ್, ಕರೀಮ್ ಜನತ್, ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜೈ, ನವೀನ್–ಉಲ್–ಹಕ್, ಮುಜೀಬ್ ಉರ್ ರಹಮಾನ್, ಫಜಲ್ ಹಕ್ ಫಾರೂಕಿ.
ಇದನ್ನೂ ಓದಿ | Asia Cup | ಪಾಕ್ ವಿರುದ್ಧ ರೋಚಕ ಪಂದ್ಯ ಸೋತ ಆಫ್ಘನ್, ಟೂರ್ನಿಯಿಂದಲೇ ಭಾರತ ಔಟ್!