ಫ್ರಾನ್ಸ್: ಸ್ಟಾರ್ ಟೆನಿಸಿಗ, 22 ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ರಫೆಲ್ ನಡಾಲ್(Rafael Nadal) ಕಳೆದ ಒಂದು ವರ್ಷದಿಂದ ಗಾಯದ ಸಮಸ್ಯೆಯಿಂದಾಗಿ ಟೆನಿಸ್ ಕೋರ್ಟ್ನಿಂದ ದೂರ ಉಳಿದಿದ್ದಾರೆ. ಮುಂದಿನ ವರ್ಷವೂ ಅವರು ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಇದರ ಮಧ್ಯೆ ಅವರು ತಮ್ಮ ನಿವೃತ್ತಿ(Rafael Nadal Retirement) ವಿಚಾರವಾಗಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
11 ತಿಂಗಳಿನಿಂದ ಆಡಿಲ್ಲ
ಸೊಂಟ ನೋವಿನ ಗಾಯಕ್ಕೆ ತುತ್ತಾಗಿರುವ ನಡಾಲ್ ಅವರು ಕೊನೆಯದಾಗಿ ಟೆನಿಸ್ ಆಡಿದ್ದು 11 ತಿಂಗಳ ಹಿಂದೆ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ. ಗಾಯದ ಮಧ್ಯೆಯೂ ಚುಚ್ಚು ಮದ್ದು ಬಳಸಿ ಕಣಕ್ಕಿಳಿದಿದ್ದ ಅವರು ಎರಡನೇ ಸುತ್ತಿನಲ್ಲಿ ಸೋಲು ಕಂಡಿದ್ದರು. ಇದೀಗ ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಾದ ಆಸ್ಟ್ರೇಲಿಯನ್ ಓಪನ್ ಎಂಟ್ರಿ ಲಿಸ್ಟ್‌ನಲ್ಲಿ ನಡಾಲ್ ಹೆಸರು ಕಾಣಿಸಿಕೊಂಡಿದೆ. ಅವರ ಹೆಸರು ಕಂಡು ಅಭಿಮಾನಿಗಳಲ್ಲಿ ಸಂತಸ ಮೂಡಿದರೂ ಅವರು ಆಡುವ ಕುರಿತು ಇನ್ನೂ ಖಚಿತತೆ ಇಲ್ಲ.
ನಿವೃತ್ತಿ ಘೋಷಿಸಲು ಬಯಸುವುದಿಲ್ಲ
37 ವರ್ಷದ ನಡಾಲ್ ನಾನು ಈಗಲೇ ನಿವೃತ್ತಿ ಘೋಷಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ‘ಮುಂದೆ ಏನಾಗಬಹುದೆಂದು ಈಗಲೇ ಹೇಳಲು ಸಾಧ್ಯವಿಲ್ಲ. ನಾನೇ ನನಗೊಂದು ಅವಕಾಶ ನೀಡಬೇಕಿದೆ. ಹಿಂದೆಯೂ ಅನೇಕ ಸಲ ಗಾಯದಿಂದ ತೇಚರಿಸಿ ಟೆನಿಸ್ ಅಂಗಳಕ್ಕೆ ಮರಳಿ ಟ್ರೋಫಿ ಗೆದ್ದಿದ್ದೇನೆ. ದೈಹಿಕವಾಗಿ ನಾನು ಗಟ್ಟಿಯಾಗಿದ್ದು ಆಡುವ ಮನಸ್ಸು ಇದ್ದಾಗ ನಾನೇಕೆ ಈಗಲೇ ನಿವೃತ್ತಿಗೆ ಕಾಲ ನಿಗದಿಪಡಿಸಲಿ” ಎಂದು ಹೇಳುವ ಮೂಲಕ ತಮ್ಮ ನಿವೃತ್ತಿ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಮುಂದಿನ ವರ್ಷ ಶ್ರೇಷ್ಠ ಆಟ
ನಾನು ನಿರಂತರವಾಗಿ ಆಡಲು ಬಯಸುತ್ತೇನೆ. ಆದರೆ ಸತತ ಗಾಯಗಳ ನಡುವೆ ಆಡುವುದು ಜಟಿಲವಾದಾಗ ಕಾರ್ಯ. ಕಳೆದ ಕೆಲವು ತಿಂಗಳುಗಳಲ್ಲಿ ನಾನು ಟೆನಿಸ್ ಅಂಗಣಕ್ಕೆ ಹಿಂತಿರುಗಲು ಕಷ್ಟಪಟ್ಟಿದ್ದೇನೆ. ಚೇತರಿಸಿಕೊಳ್ಳಲು ಮತ್ತು ಪುನಶ್ಚೇತನಕ್ಕೆ ಸಮಯ ತೆಗೆದುಕೊಳ್ಳಲು ಬಯಸಿದ್ದೇನೆ. ನಾನು ಹಿಂದಿರುಗುವ ದಿನಾಂಕವನ್ನು ಈಗಲೇ ಹೇಳವುವುದು ಕೂಡ ಕಷ್ಟ. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧಗೊಂಡ ದಿನ ಆಟಕ್ಕೆ ಮರಳುತ್ತೇನೆ. 2024ರ ಋತುವನ್ನು ಉತ್ತಮವಾಗಿ ಪ್ರಾರಂಭಿಸುವುದು ನನ್ನ ಗುರಿ ಎಂದು ಚಾಂಪಿಯನ್ ಟೆನಿಸ್ ಆಟಗಾರ ನಡಾಲ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ Rafael Nadal: ಇನ್ಫೋಸಿಸ್ಗೆ ಟೆನಿಸ್ ದಿಗ್ಗಜ ರಫೆಲ್ ನಡಾಲ್ ರಾಯಭಾರಿ
ಇನ್ಫೋಸಿಸ್ಗೆ ರಾಯಭಾರಿ
4 ತಿಂಗಳ ದಿಂದೆ ಟೆನಿಸ್ ದಿಗ್ಗಜ ರಫೆಲ್ ನಡಾಲ್ ಅವರನ್ನು ಐಟಿ ಸಂಸ್ಥೆ ಇನ್ಫೋಸಿಸ್(Infosys) ಬ್ರ್ಯಾಂಡ್ ಅಂಬಾಸಿಡರ್(global ambassador) ಆಗಿ ನೇಮಿಸಿತ್ತು. ಮುಂದಿನ ಮೂರು ವರ್ಷಗಳ ಕಾಲ ನಡಾಲ್ ಅವರು ಇನ್ಫೋಸಿಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ.
Hello everyone. Very excited to join Team @Infosys as their global brand ambassador. Infosys has brought its digital expertise to the global tennis ecosystem and love impact that Infosys is making to communities beyond the court. I am looking forward to this partnership to do… pic.twitter.com/vf8wcV5ixp
— Rafa Nadal (@RafaelNadal) August 24, 2023
“ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಗೌರವಾನ್ವಿತ ಟೆನಿಸ್ ಚಾಂಪಿಯನ್ ಆಗಿರುವ ರಫೆಲ್ ನಡಾಲ್ ಅವರನ್ನು ಇನ್ಫೋಸಿಸ್‌ನ ರಾಯಭಾರಿಯಾಗಿ ಸ್ವಾಗತಿಸಲು ಹೆಮ್ಮೆಯಾಗುತ್ತಿದೆ” ಎಂದು ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಆಗಿರುವ ಸಲೀಲ್ ಪರೇಖ್ ಹೇಳಿದ್ದರು. ಎಟಿಪಿ ಟೂರ್, ರೋಲ್ಯಾಂಡ್-ಗ್ಯಾರೋಸ್, ಆಸ್ಟ್ರೇಲಿಯನ್ ಓಪನ್ ಮತ್ತು ಸೇರಿ ಟೆನಿಸ್ ಹಾಲ್ ಆಫ್ ಫೇಮ್‌ಗೆ ಡಿಜಿಟಲ್ ಇನ್ನೋವೇಶನ್ ಪಾಲುದಾರರಾಗಿ, ಬ್ರಾಂಡ್ ಇನ್ಫೋಸಿಸ್ ಜಾಗತಿಕವಾಗಿ ಎಐ, ಕ್ಲೌಡ್, ಡೇಟಾವನ್ನು ಬಳಸಿಕೊಂಡು ಒಂದು ಬಿಲಿಯನ್ ಅಭಿಮಾನಿಗಳಿಗೆ ಟೆನಿಸ್ ಕುರಿತ ಮಾಹಿತಿಯನ್ನು ನೀಡಲು ಸದಾ ಸಿದ್ಧ ಎಂದು ಇನ್ಫೋಸಿಸ್ ತನ್ನ ಹೇಳಿಕೆಯಲ್ಲಿ ಪ್ರಕಟಿಸಿತ್ತು.