ಮುಂಬಯಿ : ಶಿಖರ್ ಧವನ್ ನೇತೃತ್ವದ ಭಾರತ ತಂಡ (Team India) ನ್ಯೂಜಿಲ್ಯಾಂಡ್ ವಿರುದ್ಧದ ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋತಿದ್ದು, ಭಾನುವಾರ ಎರಡನೇ ಹಣಾಹಣಿ ನಡೆಯಲಿದೆ. ಈ ಸರಣಿಗೆ ಭಾರತ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಕೆ. ಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ಹಿರಿಯ ಆಟಗಾರರಿಗೆ ಆಗಾಗ ವಿಶ್ರಾಂತಿ ನೀಡುತ್ತಿರುವುದು ಈಗ ಚರ್ಚೆಯ ಸಂಗತಿಯಾಗಿದ್ದು, ಇದರಿಂದ ಪ್ರಮುಖ ಟೂರ್ನಿಗಳಲ್ಲಿ ಭಾರತ ತಂಡದ ಪ್ರದರ್ಶನಕ್ಕೆ ಹಿನ್ನಡೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ ಕೂಡಾ ಇದೇ ಪ್ರಶ್ನೆಯನ್ನು ವಿಭಿನ್ನವಾಗಿ ಎತ್ತಿದ್ದಾರೆ.
ಅಭಿಮಾನಿಯೊಬ್ಬರು ಆಕಾಶ್ ಚೋಪ್ರಾ ಅವರಿಗೆ ಹಿರಿಯ ಆಟಗಾರರ ಅಲಭ್ಯತೆಯನ್ನು ಪ್ರಶ್ನಿಸಿದ್ದಾರೆ. ಪ್ರಮುಖವಾಗಿ ನಾಯಕ ರೋಹಿತ್ ಶರ್ಮ ಅವರ ನಾಯಕತ್ವದ ಸೇವೆ ದೊರೆಯದಿರುವ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ಮಾರ್ಮಿಕವಾಗಿ ಉತ್ತರಿಸಿದ ಆಕಾಶ್ “ಇಂಗ್ಲೆಂಡ್ ತಂಡಕ್ಕೆ ಜೋಸ್ ಬಟ್ಲರ್ ನಾಯಕ, ಆಸ್ಟ್ರೇಲಿಯಾ ತಂಡಕ್ಕೆ ಪ್ಯಾಟ್ ಕಮಿನ್ಸ್ ನಾಯಕ ಹಾಗೂ ಶ್ರೀಲಂಕಾ ತಂಡಕ್ಕೆ ದಸುನ್ ಶನಕ ನಾಯಕರಾಗಿದ್ದಾರೆ. ಆದರೆ, ಭಾರತ ತಂಡಕ್ಕೆ ನಾಯಕರೇ ಇಲ್ಲ,” ಎಂಬುದಾಗಿ ಅವರು ಉತ್ತರ ನೀಡಿದ್ದಾರೆ.
ರೋಹಿತ್ ಶರ್ಮ ಹಾಲಿ ಕ್ರಿಕೆಟ್ ಋತುವಿನಲ್ಲಿ ಕೇವಲ ಎರಡು ಏಕ ದಿನ ಸರಣಿಗೆ ನಾಯಕತ್ವ ವಹಿಸಿಕೊಂಡಿದ್ದರು. ಶಿಖರ್ ಧವನ್ ನ್ಯೂಜಿಲ್ಯಾಂಡ್ ಸರಣಿ ಸೇರಿದಂತೆ ೯ ಪಂದ್ಯಗಳಿಗೆ ನಾಯಕತ್ವ ವಹಿಸಿದಂತಾಗುತ್ತದೆ. ಕೆ. ಎಲ್ ರಾಹುಲ್ ಆರು ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. ಟಿ೨೦ ಮಾದರಿಗೆ ಗಮನ ಕೇಂದ್ರಿಕರಿಸಲು ಈ ಬದಲಾವಣೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಆದರೆ, ಇನ್ನು ಮುಂದೆ ಏಕ ದಿನ ವಿಶ್ವ ಕಪ್‌ಗೆ ಭಾರತ ಸಜ್ಜಾಗಬೇಕಾಗಿದೆ. ಇಂಥ ಸಂದರ್ಭದಲ್ಲಿ ರೋಹಿತ್ ಶರ್ಮ ಅವರ ಸೇವೆ ಕಳೆದುಕೊಳ್ಳುವುದು ತಂಡದ ಪಾಲಿಗೆ ನಷ್ಟ ಉಂಟು ಮಾಡಲಿದೆ ಎಂಬುದು ಆಕಾಶ್ ಚೋಪ್ರಾ ಅವರ ಅಭಿಪ್ರಾಯವಾಗಿದೆ.
“ಶ್ರೀಲಂಕಾ ತಂಡ ದಸುನ್ ಶನಕ ನಾಯಕತ್ವದಲ್ಲಿ ಅಫಘಾನಿಸ್ತಾನ ವಿರುದ್ಧ ಆಡುತ್ತಿದೆ. ಇಂಗ್ಲೆಂಡ್ ತಂಡ ಬಟ್ಲರ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿದೆ. ಆಸ್ಟ್ರೇಲಿಯಾ ತಂಡವ ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸುತ್ತಿದೆ. ಹಾಗಾದರೆ ಟೀಮ್ ಇಂಡಿಯಾ ಮಾತ್ರ ಕಾಯಂ ನಾಯಕ ಇಲ್ಲದೇ ನ್ಯೂಜಿಲ್ಯಾಂಡ್ ವಿರುದ್ಧ ಆಡುತ್ತಿದೆ. ಹೀಗಾಗಿ ಅಭಿಮಾನಿ ಕೇಳಿರುವ ಪ್ರಶ್ನೆ ಸರಿಯಾಗಿಯೇ ಇದೆ,” ಎಂಬುದಾಗಿ ಚೋಪ್ರಾ ಹೇಳಿದ್ದಾರೆ.
ಇದನ್ನೂ ಓದಿ ವ| ವRohit Sharma | ಬಾಂಗ್ಲಾ ಸರಣಿಗೆ ಸಜ್ಜಾಗುತ್ತಿರುವ ರೋಹಿತ್ ಶರ್ಮ; ನೆಟ್ಸ್ನಲ್ಲಿ ಭರ್ಜರಿ ತಾಲೀಮು