Site icon Vistara News

IND vs PAK | ಒತ್ತಡದಲ್ಲಿ ತಪ್ಪು ಸಹಜ; ಕ್ಯಾಚ್‌ ಬಿಟ್ಟ ಅರ್ಶ್‌ದೀಪ್‌ಗೆ ಸಮಾಧಾನ ಹೇಳಿದವರು ಯಾರು?

ind vs pak

ದುಬೈ : ಸೆಪ್ಟೆಂಬರ್‌ ೪ರಂದು ನಡೆದ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳ ನಡುವಿನ ಪಂದ್ಯದಲ್ಲಿ ಭಾರತ ೫ ವಿಕೆಟ್‌ಗಳಿಂದ ಸೋಲುಂಡಿತು. ಆ ಪಂದ್ಯದಲ್ಲಿ ಭಾರತ ತಂಡಕ್ಕೆ ಗೆಲುವಿನ ಅವಕಾಶ ಕೆಲವೊಂದು ಬಾರಿ ಒದಗಿ ಬಂದಿತ್ತು. ಆದರೆ, ಅದನ್ನು ಭಾರತ ತಂಡದ ಆಟಗಾರರು ಸದ್ಬಳಕೆ ಮಾಡಿಕೊಂಡಿಲ್ಲ. ಅದರಲ್ಲೊಂದು ಅಸಿಫ್‌ ಅಲಿಯ ಕ್ಯಾಚ್‌. ಅದನ್ನು ಅರ್ಶ್‌ದೀಪ್‌ ಸಿಂಗ್‌ ಕೈಚೆಲ್ಲಿದ್ದರು. ಭಾರತ ತಂಡದ ಬಹುತೇಕ ಅಭಿಮಾನಿಗಳು ಈ ಕ್ಯಾಚ್‌ ಡ್ರಾಪ್‌ ಭಾರತದ ಸೋಲಿಗೆ ಕಾರಣ ಎಂದು ನಂಬಿದ್ದಾರೆ. ಆದರೆ, ಟೀಮ್‌ ಇಂಡಿಯಾದ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಅದನ್ನು ಒಪ್ಪುವುದಿಲ್ಲ. ಅರ್ಶದೀಪ್‌ ಕ್ಯಾಚ್‌ ಬಿಡುವ ಮೊದಲೇ ಗೆಲುವು ಪಾಕಿಸ್ತಾನ ತಂಡದ ಪರ ವಾಲಿತ್ತು ಎಂದಿದ್ದಾರೆ.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ “ಒತ್ತಡದ ಸಂದರ್ಭದಲ್ಲಿ ತಪ್ಪುಗಳು ಘಟಿಸುತ್ತವೆ. ಅಂತೆಯೇ ಅರ್ಶದೀಪ್‌ ಸಿಂಗ್‌ ಒತ್ತಡದಲ್ಲಿ ಕ್ಯಾಚ್‌ ಕೈ ಚೆಲ್ಲಿದ್ದಾರೆ. ಇವೆಲ್ಲವೂ ಮಾಮೂಲಿ. ಪಾಕಿಸ್ತಾನದಂಥ ತಂಡಗಳ ವಿರುದ್ಧದ ಪಂದ್ಯದಲ್ಲಿ ಇಂಥದ್ದು ಸಹಜ. ನಾನು ಕೂಡ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಆಡುವ ವೇಳೆ ಕೆಟ್ಟ ಹೊಡೆತವನ್ನು ಹೊಡೆದು ಔಟಾಗಿದ್ದೆ,” ಎಂದು ಅರ್ಶ್‌ದೀಪ್‌ ಅವರನ್ನು ಬೆಂಬಲಿಸಿದ್ದಾರೆ.

ಗೆಲುವು ಕಸಿದ ನವಾಜ್‌

ಮುಂಬಡ್ತಿ ಪಡೆದುಕೊಂಡು ಬ್ಯಾಟಿಂಗ್ ಮಾಡಲು ಬಂದ ಮೊಹಮ್ಮದ್ ನವಾಜ್‌ ಭಾರತ ತಂಡದ ಗೆಲುವು ಕಸಿದುಕೊಂಡರು ಎಂದು ಇದೇ ವೇಳೆ ಕೊಹ್ಲಿ ಹೇಳಿದ್ದಾರೆ. ಲೆಗ್‌ ಸ್ಪಿನ್ನರ್‌ಗಳನ್ನು ಎದುರಿಸುವ ಉದ್ದೇಶಕ್ಕೆ ಪಾಕಿಸ್ತಾನ ತಂಡ ನವಾಜ್‌ಗೆ ಮುಂಬಡ್ತಿ ಕೊಟ್ಟಿತ್ತು. ಅದನ್ನವರು ಸದ್ಬಳಕೆ ಮಡಿಕೊಂಡರು. ಕೇವಲ ೨೦ ಎಸೆತಗಳಲ್ಲಿ ೪೨ ರನ್ ಬಾರಿಸಿದರು. ಅಲ್ಲಿಯೇ ಪಂದ್ಯ ತಿರುವು ಪಡೆದುಕೊಂಡಿತ್ತು,” ಎಂದು ವಿರಾಟ್‌ ಕೊಹ್ಲಿ ನುಡಿದಿದ್ದಾರೆ.

ಇದೇ ವೇಳೆ ಅವರು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದಾಗಿಯೂ ಹೇಳಿದರು. ನಾನು ೧೪ ವರ್ಷಗಳಿಂದ ಕ್ರಿಕೆಟ್‌ ಆಡುತ್ತಿದ್ದೇನೆ. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವ ಜಾಯಮಾನ ನನ್ನದಲ್ಲ. ಕ್ರಿಕೆಟ್‌ ಆಡುವುದು, ಸ್ಕೋರ್ ಬಾರಿಸುವುದು ನನ್ನ ಜವಾಬ್ದಾರಿಯಾಗಿದೆ. ಒಂದು ಬಾರಿ ಅವಕಾಶ ನನ್ನ ಪರವಾಗಿ ಬಂದರೆ ಆಟದಲ್ಲಿ ಖುಷಿ ಪಡುತ್ತೇನೆ,” ಎಂದು ಅವರು ಕೊಹ್ಲಿ ಹೇಳಿದರು.

ಇದನ್ನೂ ಓದಿ | Virat kohli | ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧ ಶತಕಗಳು ಬಾರಿಸಿದ ವಿರಾಟ್‌ ಕೊಹ್ಲಿ

Exit mobile version