ಹೊಸದಿಲ್ಲಿ : ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಕುಲ್ದೀಪ್ ಯಾದವ್ ಅವರನ್ನು ಹೊರಗಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಬಳಿಸಿ ಪಂದ್ಯಶ್ರೇಷ್ಠ ಪುರಸ್ಕಾರ ಪಡೆದ ಅವರನ್ನು ಮುಂದಿನ ಪಂದ್ಯದಲ್ಲಿ ಅಡುವ ಬಳಗದಿಂದಲೇ ಹೊರಗಿಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಹಿಸಲಾಗದ ಸಂಗತಿ ಎನಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್, ನಂಬಲು ಅಸಾಧ್ಯವಾದ ಬದಲಾವಣೆ ಎಂದು ಹೇಳಿಕೊಂಡಿದ್ದಾರೆ.
ಕುಲ್ದೀಪ್ ಯಾದವ್ ಚತ್ತೋಗ್ರಾಮ್ನಲ್ಲಿ ನಡೆದ ಮೊದಲ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 40 ರನ್ ಬಾರಿಸಿದ್ದರು. ಅಂತೆಯೇ ಮೊದಲ ಇನಿಂಗ್ಸ್ ಬೌಲಿಂಗ್ನಲ್ಲಿ 40 ರನ್ಗಳಿಗೆ 5 ವಿಕೆಟ್ ಕಬಳಿಸಿದ್ದರು. ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿದ್ದರು. 113 ರನ್ಗಳಿಗೆ 8 ವಿಕೆಟ್ ಕಬಳಿಸಿದ ಅವರು 188 ರನ್ಗಳ ಬೃಹತ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದಾಗ್ಯೂ ಎರಡನೇ ಪಂದ್ಯಕ್ಕೆ ಬೆಂಚು ಕಾಯಿಸಿದ್ದು ಗವಾಸ್ಕರ್ಗೆ ಸರಿ ಎನಿಸಲಿಲ್ಲ.
ಸೋನಿ ಸ್ಪೋರ್ಟ್ಸ್ ಜತೆ ಮಾತನಾಡಿದ ಅವರು “ಇದು ನಂಬಲು ಸಾಧ್ಯವೇ ಇಲ್ಲದ ನಿರ್ಧಾರ. ಇದು ನಾನು ಬಳಸಬಹುದಾದ ಒಳ್ಳೆಯ ಪದ. ಇನ್ನೂ ಕೆಟ್ಟ ಪದಗಳನ್ನು ನಾನು ಬಳಸಬಹುದಾಗಿತ್ತು. ಆದರೆ, ಅದನ್ನು ಮಾಡುವುದಿಲ್ಲ. 20 ವಿಕೆಟ್ಗಳಲ್ಲಿ 8 ವಿಕೆಟ್ ಕಬಳಿಸಿದ್ದಾರೆ, ಅವರನ್ನು ಆಡಿಸದೇ ಹೋಗಿರುವುದು ಸೂಕ್ತ ನಿರ್ಧಾರವಲ್ಲ ” ಎಂಬುದಾಗಿ ಹೇಳಿದ್ದಾರೆ.
“ಟೀಮ್ ಇಂಡಿಯಾದಲ್ಲಿ ಇನ್ನಿಬ್ಬರು ಸ್ಪಿನ್ನರ್ಗಳಿದ್ದರು. ಅಕ್ಷರ್ ಪಟೇಲ್, ಆರ್. ಅಶ್ವಿನ್. ಅವರಲ್ಲಿ ಒಬ್ಬರನ್ನು ತಂಡದಿಂದ ಹೊರಕ್ಕೆ ಇಡಬಹುದಾಗಿತ್ತು. ಆದರೆ, ಆ ರೀತಿ ಮಾಡಿಲ್ಲ. ಪಿಚ್ ಕೂಡ ಸ್ಪಿನ್ಗೆ ಅನುಕೂಲಕರವಾಗಿರುವ ವೇಳೆ ಎಂಟು ವಿಕೆಟ್ ಪಡೆದ ಆಟಗಾರನನ್ನು ಪಂದ್ಯದಿಂದ ಕೈ ಬಿಟ್ಟಿರುವುದು ಸರಿಯಲ್ಲ,” ಎಂಬುದಾಗಿ ಅವರು ಹೇಳಿದರು.
ಇದನ್ನೂ ಓದಿ | Kuldeep Yadav | ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿದ ಕುಲ್ದೀಪ್ ಯಾದವ್ ಸಾಧನೆಗಳಿವು