ಸಿಡ್ನಿ: ಭಾರತ ತಂಡವನ್ನು ಆಸ್ಟ್ರೇಲಿಯಾದಂತೆ ಮಾಡುತ್ತೇನೆ ಎಂದು ಟೀಮ್ ಇಂಡಿಯಾದ ಕೋಚ್ ಆಗಿ ಭಾರತ ತಂಡವನ್ನು ಹಳ್ಳಹಿಡಿಸಿದ್ದ ಗ್ರೆಗ್ ಚಾಪೆಲ್(Greg Chappell) ಅವರು ತೀವ್ರ ಆರ್ಥಿಕ ಸಂಕಷ್ಟಕ್ಕೆ(Facing Financial Struggle) ಸಿಲುಕಿದ್ದು, ನಿಧಿ ಸಂಗ್ರಹದ ಮೂಲಕ ಅವರಿಗೆ ನೆರವಾಗಲು ಗೆಳೆಯರು ಆನ್ಲೈನ್ ಅಭಿಯಾನ ಆರಂಭಿಸಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ಆಟಗಾರನಾಗಿರುವ 75 ವರ್ಷದ ಚಾಪೆಲ್ ಅವರು 2005ರಿಂದ 2007ರ ಅವಧಿಯಲ್ಲಿ ಭಾರತ ತಂಡದ ಮುಕ್ಯ ಕೋಚ್ ಆಗಿದ್ದರು. ಇವರು ಕೋಚಿಂಗ್ಗಿಂತ ವಿದಾದದಲ್ಲೇ ಹೆಚ್ಚು ಸುದ್ದಿಯಾಗಿದ್ದರು. ಸೌರವ್ ಗಂಗೂಲಿ ಜತೆಗಿನ ಕಿತ್ತಾಡದಿಂದ ಕೊನೆಗೆ ಕೋಚಿಂಗ್ ಹುದ್ದೆಯನ್ನೇ ತ್ಯಜಿಸಿದ್ದರು. ಭಾರತ ತಂಡ ಅತ್ಯಂತ ಕೆಟ್ಟ ಕೋಚ್ ಇವರಾಗಿದ್ದರು. ಬಲಿಷ್ಠ ಭಾರತ ತಂಡವನ್ನು ಒಂದು ಹಂತದಲ್ಲಿ ಸರ್ವನಾಶ ಮಾಡಿದ್ದು ಇದೇ ಚಾಪೆಲ್. ಇದೀಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
“ನಾನು ಬಡವನೆಂದು ಕಣ್ಣೀರು ಹಾಕುತ್ತಿಲ್ಲ. ಆದರೆ ಈಗಿನ ಕ್ರಿಕೆಟಿಗರು ಅನುಭವಿಸುತ್ತಿರುವ ಶ್ರೀಮಂತ ಜೀವನ ನನ್ನದಲ್ಲ” ಎಂದು ಚಾಪೆಲ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೆ ತನ್ನ ಕಾಲದ ಕ್ರಿಕೆಟಿಗರ ಪೈಕಿ ತಾನೊಬ್ಬನೇ ಈ ಪರಿಸ್ಥಿತಿಯನ್ನು ಎದುರಿಸುತಿಲ್ಲ, ಇನ್ನೂ ಅನೇಕರು ಇದೇ ರೀತಿಯ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಚಾಪೆಲ್ಗೆ “ಗೋಫಂಡ್ಮೀ’ ಪೇಜ್ ಮೂಲಕ ಅವರ ಗೆಳೆಯರು ನಿಧಿ ಸಂಗ್ರಹಿಸುತ್ತಿದ್ದು, ಇದಕ್ಕೆ ಅವರ ಸಹೋದರರು ಹಾಗೂ ಮಾಜಿ ಕ್ರಿಕೆಟಿಗರಾದ ಇಯಾನ್ ಮತ್ತು ಟ್ರೆವರ್ ಚಾಪೆಲ್ ಕೂಡ ಕೈಜೋಡಿಸಿದ್ದಾರೆ.
ಗಂಗೂಲಿ-ಚಾಪೆಲ್ ಮಧ್ಯೆ ಕಿತ್ತಾಟ
2005ರಲ್ಲಿ ಚಾಪೆಲ್ ಕೋಚಿಂಗ್ ವಹಿಸಿಕೊಂಡ ನಂತರ ಭಾರತ ಮೊದಲ ಸರಣಿ ಆಡಲು ಲಂಕೆಗೆ ಪ್ರಯಾಣ ಬೆಳೆಸಿತ್ತು. ಆದರೆ ಸೌರವ್ ಗಂಗೂಲಿಗೆ ಅದರ ಹಿಂದಿನ ಸರಣಿಯಲ್ಲಿ ನಿಧಾನಗತಿಯ ಓವರ್ ಗಳ ಕಾರಣದಿಂದ 4 ಪಂದ್ಯ ನಿಷೇಧ ಹೇರಲಾಗಿತ್ತು. ಹೀಗಾಗಿ ದ್ರಾವಿಡ್ ಟೀಮ್ ಇಂಡಿಯಾ ನಾಯಕತ್ವ ವಹಿಸಿದ್ದರು. ಈ ಸರಣಿಯಲ್ಲಿ ಚಾಪೆಲ್ ಅವರು ಸುರೇಶ್ ರೈನಾರನ್ನು ಅಂತಾರಾಷ್ಟೀಯ ಕ್ರಿಕೆಟ್ಗೆ ಪರಿಚಯಿಸಿದ್ದರು.
ನಿಷೇಧದಿಂದ ಹೊರಬಂದ ಗಂಗೂಲಿ ಮತ್ತೆ ತಂಡದ ಚುಕ್ಕಾಣಿ ಹಿಡಿದರು. ಭಾರತ ಜಿಂಬಾಬ್ವೆ ಸರಣಿಗೆ ಹೊರಟಿತ್ತು. ಅಲ್ಲೇ ನೋಡಿ ಚಾಪೆಲ್ ರ ಹೊಸ ಆವಿಷ್ಕಾರಗಳು ಆರಂಭವಾಗಿದ್ದು. ಒಂದು ಅಭ್ಯಾಸ ಪಂದ್ಯವಾದ ನಂತರ ಅಷ್ಟೇನು ಫಾರ್ಮ್‌ನಲ್ಲಿ ಇರದ ಗಂಗೂಲಿಗೆ ಚಾಪೆಲ್ ಒಂದು ಸಲಹೆ ನೀಡಿದರು. ಅದೇ ಸಲಹೆ ಮುಂದೆ ಅನೇಕ ವಿದ್ಯಮಾನಗಳಿಗೆ ಕಾರಣವಾಗಿತ್ತು.
ಇದನ್ನೂ ಓದಿ Team India Coach: ವಿಶ್ವಕಪ್ ಬಳಿಕ ಭಾರತ ತಂಡಕ್ಕೆ ನೂತನ ಕೋಚ್; ದ್ರಾವಿಡ್ ನಿರ್ಧಾರವೇನು?
ನಾಯಕತ್ವ ತ್ಯಜಿಸಲು ಒತ್ತಾಯ
ಅಭ್ಯಾಸ ಪಂದ್ಯದ ನಂತರ ನಾಯಕ ಗಂಗೂಲಿಗೆ ಕೋಚ್ ಚಾಪೆಲ್ ನಾಯಕತ್ವದಿಂದ ಕೆಳಗಿಳಿಯುವಂತೆ ಹೇಳುತ್ತಾರೆ. ಇದರೊಂದಿಗೆ ಆಗ ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಡುತ್ತಿದ್ದ ಯುವರಾಜ್ ಅವರನ್ನು ಗಂಗೂಲಿ ಸ್ಥಾನಕ್ಕೆ ತರಬೇಕೆಂದು ಚಾಪೆಲ್ ಇಚ್ಛೆಯಾಗಿತ್ತು. ಇದರಿಂದ ರೋಸಿಹೋದ ಗಂಗೂಲಿ ಸರಣಿಯ ಮಧ್ಯದಲ್ಲೇ ಭಾರತಕ್ಕೆ ಹಿಂದೆ ಬರಲು ಬಯಸಿದ್ದರು, ಆದರೆ ದ್ರಾವಿಡ್ ಸೇರಿದಂತೆ ಹಿರಿಯ ಆಟಗಾರರು ಸೌರವ್ ಮನಸ್ಸು ಬದಲಾಯಿಸಿದ್ದರು ಎಂದು ವರದಿಯಾಗಿತ್ತು. ತಂಡದ ನಾಯಕತ್ವದಲ್ಲಿ ಮುಂದುವರಿಯಲು ಸೌರವ್ ಗಂಗೂಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಮರ್ಥರಾಗಿಲ್ಲ ಎಂದು ಬರೆದು ಬಿಸಿಸಿಐಗೆ ಚಾಪೆಲ್ ಇ ಮೇಲ್ ಕಳುಹಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಭಾರಿ ಪ್ರತಿಭಟನೆ
ಮುಂದಿನ ಸರಣಿಯಲ್ಲಿ ಗಂಗೂಲಿಯನ್ನು ಟಾರ್ಗೆಟ್ ಮಾಡಿದ್ದ ಚಾಪೆಲ್ ಸುಳ್ಳು ಗಾಯದ ನೆಪವೊಡ್ಡಿ ಬೆಂಚ್ ಕಾಯಿಸಿದ್ದರು. ಇದರಿಂದ ರೋಸಿ ಹೋದ ಅವರ ಅಭಿಮಾನಿಗಳು, ವಿದ್ಯಾರ್ಥಿಗಳು, ರಾಜಕಾರಣಿಗಳು ಚಾಪೆಲ್ ವಿರುದ್ಧ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಗಂಗೂಲಿ ತವರು ಪಶ್ಚಿಮ ಬಂಗಾಳದಲ್ಲಿ ರೈಲು ಓಡಾಟವನ್ನು ತಡೆಹಿಡಿಯಲಾಗಿತ್ತು. ಹಲವು ಬೀದಿಯಲ್ಲಿ ಬೆಂಕಿ ಹಚ್ಚಲಾಗಿತ್ತು. ಅಚ್ಚರಿ ಎಂದರೆ ಲೋಕಸಭೆಯಲ್ಲೂ ಈ ವಿಷಯ ಚರ್ಚೆಯಾಗಿತ್ತು.
ದೊಡ್ಡ ಆಸೆಗಳನ್ನು ಭಾರತೀಯ ಕ್ರಿಕೆಟ್ ವಲಯದಲ್ಲಿ ಹುಟ್ಟಿಸಿದ್ದ ಚಾಪೆಲ್ ಭಾರತ ತಂಡದ ಒಗ್ಗಟ್ಟನ್ನೇ ಮುರಿದು ಹಾಕಿದ್ದರು. ಇದೇ ವಿಚಾರವಾಗಿ ಕ್ರಿಕೆಟ್ನ ಸವ್ಯ ಸಾಚಿ ಸಚಿನ್ ತೆಂಡೂಲ್ಕರ್ ಕೂಡ ಚಾಪೆಲ್ ಕೋಚ್ ಅಗಿದ್ದ ಎರಡು ವರ್ಷ ಭಾರತೀಯ ಕ್ರಿಕೆಟ್ ಅತ್ಯಂತ ಕಷ್ಟದ ವಾತಾವರಣವನ್ನು ಎದುರಿಸಿತ್ತು ಎಂದು ಹಿಂದೊಮ್ಮೆ ಹೇಳಿದ್ದರು.