Site icon Vistara News

‘ಭಾರತ ಬಳಸಿದ್ದ ಚೆಂಡನ್ನು ಆಫ್ಘನ್‌ಗೆ ನೀಡಲಾಗಿದೆ’; ಮತ್ತೆ ನಾಲಗೆ ಹರಿಬಿಟ್ಟ ರಾಝಾ

hasan raza

ಕರಾಚಿ: ಕೆಲ ದಿನಗಳ ಹಿಂದೆ ಭಾರತ ತಂಡಕ್ಕೆ ಐಸಿಸಿ ಮತ್ತು ಬಿಸಿಸಿಐ ಸೇರಿಕೊಂಡು ವಿಶೇಷ ಚೆಂಡನ್ನು ನೀಡುತ್ತಿದೆ, ಡಿಆರ್‌ಎಸ್‌ನಲ್ಲಿಯೂ ತೀರ್ಪುಗಳು ಭಾರತಕ್ಕೆ ಫೇವರ್‌ ಮಾಡುತ್ತಿದ್ದಾರೆ ಎಂದು ಹೇಳಿದ್ದ ಪಾಕಿಸ್ತಾನ ಮಾಜಿ ಆಟಗಾರ ಹಸನ್‌ ರಾಝಾ(hasan raza), ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಫ್ಘನ್‌ ತಂಡಕ್ಕೆ ಭಾರತ ಬಳಸಿದ್ದ ಚೆಂಡನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಕ್ರೀಡಾ ಸಂದರ್ಶನದಲ್ಲಿ ಮಾತನಾಡಿದ ರಾಝಾ, “ಪಂದ್ಯದಲ್ಲಿ ಚೆಂಡು ಸಾಮಾನ್ಯವಾಗಿ ಸ್ವಿಂಗ್ ಆಗುತ್ತದೆ. ಆದರೆ ಅಫಘಾನಿಸ್ತಾನದ ವೇಗಿ ನವೀನ್ ಉಲ್ ಹಕ್ ಬೌಲಿಂಗ್‌ ನಡೆಸುವಾಗ ಕೊಂಚ ಹೆಚ್ಚು ಸ್ವಿಂಗ್‌ ಆಗುತ್ತಿತ್ತು. ಅಲ್ಲದೆ ಸ್ಲಿಪ್‌ನಲ್ಲಿ ಎರಡು ಆಟಗಾರರನ್ನು ನಿಲ್ಲಿಸಲಾಗಿತ್ತು. ಇದನ್ನು ಗಮನಿಸಿದರೆ ಚೆಂಡಿನ ಗುಣದ ಬಗ್ಗೆ ಜ್ಞಾನ ಇದ್ದವರಿಗೆ ಇದು ಅರ್ಥವಾಗುತ್ತದೆ. ಇಲ್ಲಿ ಬೇರೆಯೇ ಚೆಂಡು ಬಳಸಲಾಗಿದೆ. ಅದು ಭಾರತ ತಂಡಕ್ಕೆ ತಯಾರಿಸಿದ ಚೆಂಡಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ ‘ಇದು ನಿಮ್ಮಿಂದ ಮಾತ್ರ ಸಾಧ್ಯ’; ಮ್ಯಾಕ್ಸ್​ವೆಲ್​ಗೆ ಕಿಂಗ್​ ಕೊಹ್ಲಿಯಿಂದ ಮೆಚ್ಚುಗೆ

ಅಫಘಾನಿಸ್ತಾನ ಮೊದಲ 20 ಓವರ್‌ಗಳ ಆಸ್ಟ್ರೇಲಿಯಾದ ವಿಕೆಟ್‌ಗಳನ್ನು ಸತತವಾಗಿ ಕೀಳುವಲ್ಲಿ ಯಶಸ್ವಿಯಾಯಿತು. ಆದರೆ ಆ ಬಳಿಕ ವಿಕೆಟ್‌ ಕೀಳಲು ಸಾಧ್ಯವಾಗಲಿಲ್ಲ ಏಕೆ? ಎಂದು ನಿರೂಪಕ, ರಾಝಾ ಅವರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಾಝಾ, ಭಾರತದ ಬೌಲರ್‌ಗಳು ಬಳಸುತ್ತಿದ್ದ ಚೆಂಡನ್ನು ಆಫ್ಘನ್‌ಗೆ ನೀಡಲಾಗಿತ್ತು. ಆದ್ದರಿಂದಲೇ ಚೆಂಡು ಹೆಚ್ಚು ಸ್ವಿಂಗ್ ಆಗಿ ಬ್ಯಾಟರ್‌ಗಳ ಪ್ಯಾಡ್‌ಗೆ ಬಡಿಯುತ್ತಿತ್ತು ಮತ್ತು ಚೆಂಡು ಬ್ಯಾಟ್‌ಗೆ ತಗುಲಿ ಸ್ಲಿಪ್‌ನಲ್ಲಿ ನಿಂತಿದ್ದ ಆಟಗಾರರ ಕೈ ಸೇರುತ್ತಿತ್ತು. ಹೀಗಾಗಿ ವಿಕೆಟ್‌ ಬಡಬಡಣೆ ಬೀಳುತ್ತಿತ್ತು ಎಂದು ಹಸನ್ ರಾಜಾ ಹೇಳಿದರು.

ಅಸಂಬದ್ಧ ಹೇಳಿಕೆ ನೀಡುವ ರಾಝಾ ಬಗ್ಗೆ ನೆಟ್ಟಿಗರು ಕಿಡಿ ಕಾರಿದ್ದು, ನಿಮ್ಮ ಈ ಹೇಳಿಕೆಯ ಬಗ್ಗೆ ಯಾರು ತಲೆ ಕಡೆಸಿಕೊಳ್ಳುವುದಿಲ್ಲ. ತಮ್ಮ ದೇಶದವರೇ ಈಗಾಗಲೇ ನಿಮಗೆ ತಕ್ಕ ಉತ್ತರ ನೀಡಿದ್ದಾರೆ. ಹೀಗಿರುವಾಗ ಇದರ ಬಗ್ಗೆ ಮಾತನಾಡದೆ ಇರುವುದು ಒಳಿತು. ಎಂದು ಕಮೆಂಟ್‌ ಮಾಡಿದ್ದಾರೆ.

ನಿಮ್ಮಿಂದ ನಮಗೆ ಮುಜುಗರ

ಭಾರತ ವಿರುದ್ಧ ಆರೋಪ ಮಾಡಿದ್ದ ರಾಝಾ ಅವರ ಹೇಳಿಕೆಗೆ ಪ್ರತಿಕ್ರಿಕೆ ನೀಡಿದ್ದ ಪಾಕಿಸ್ತಾನ ದಿಗ್ಗಜ ಆಟಗಾರ ವಾಸಿಂ ಅಕ್ರಮ್​ ಅವರು, “ಅಸಂಬದ್ದ ಹೇಳಿಕೆ ನೀಡುವುದರಿಂದ ನಿಮ್ಮಗೆ ಮಾತ್ರವಲ್ಲದೆ ನಮಗೂ ಮುಜುಗರವನ್ನುಂಟು ಮಾಡುತ್ತಿದ್ದೀರಿ” ಎಂದು ಬಹಿರಂಗವಾಗಿಯೇ ಟಿವಿ ಸಂದರ್ಶನದಲ್ಲಿ ರಾಝಾ ಹೇಳಿಕೆಯನ್ನು ಕಡ್ಡಿ ಮುರಿದಂತೆ ಖಂಡಿಸಿದ್ದರು.

“ಪಂದ್ಯವೊಂದು ಆರಂಭಗೊಳ್ಳುವಾಗ ಮೊದಲು ಅಂಪೈರ್​ಗಳು ಚೆಂಡುಗಳ ಬಾಕ್ಸ್‌ನೊಂದಿಗೆ ಮೊದಲು ಬೌಲಿಂಗ್ ಮಾಡುವ ತಂಡದ ಬಳಿಗೆ ಹೋಗಿ 2 ಚೆಂಡುಗಳನ್ನು ಆರಿಸಿಕೊಳ್ಳುವ ಅವಕಾಶ ನೀಡುತ್ತಾರೆ. ಈ ವೇಳೆ ಪಂದ್ಯದ ಎಲ್ಲ ಅಂಪೈರ್​ಗಳು ಐಸಿಸಿ ಮತ್ತು ತಂಡದ ಕೆಲ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಬೌಲರ್​ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡಿದ ಬಳಿಕ ಉಳಿದ ಚೆಂಡುಗಳನ್ನು ಅಂಪೈರ್​ಗಳು ಡ್ರೆಸ್ಸಿಂಗ್ ಕೋಣೆಗೆ ಕೊಂಡೊಯ್ಯುತ್ತಾರೆ.


ಆ ಬಳಿಕ ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೌಲಿಂಗ್​ಗೆ ಇಳಿದಾಗ ಅವರಿಗೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಇಲ್ಲಿಯೂ ಸಹ ಬೌಲಿಂಗ್ ಮಾಡುವ ತಂಡದ ಬೌಲರ್​ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ. ನಂತರ ಬಾಕ್ಸ್​ನಲ್ಲಿ ಉಳಿದ ಚೆಂಡುಗಳನ್ನು ನಾಲ್ಕನೇ ಅಂಪೈರ್‌ಗೆ ಹಸ್ತಾಂತರಿಸುತ್ತಾರೆ. ಹೀಗಾಗಿ ಭಾರತ ತಂಡದ ಬೌಲರ್​ಗಳಿಗೆ ಮಾತ್ರ ಬೇರೆಯದ್ದೆ ಚೆಂಡುಗಳನ್ನು ನೀಡುವುದು ಅಸಾಧ್ಯ. ಇದೊಂದು ಅಸಂಬದ್ದ ಹೇಳಿಕೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಅಕ್ರಮ್ ಹೇಳಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version