ಬೆಂಗಳೂರು: ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತಿದ್ದರಿಂದ ನಿರಾಸೆಯಾದರೂ ಈ ಆವೃತ್ತಿಯಲ್ಲಿ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಿಳಿಸಿದ್ದಾರೆ.
ಅಹಮದಾಬಾದ್‌ನಲ್ಲಿ ಶುಕ್ರವಾರ ಆರ್‌ಆರ್ ಮತ್ತು ಆರ್‌ಸಿಬಿ ಪಂದ್ಯದ ನಂತರ ಮಾತನಾಡಿದ ಅವರು, ಐಪಿಎಲ್ 15ನೇ ಆವೃತ್ತಿ ಅದ್ಭುತವಾಗಿ ನಡೆದಿದೆ. ನಮ್ಮ ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ. ಹೊಸ ಚೆಂಡಿನಲ್ಲಿ ಬ್ಯಾಟಿಂಗ್ ಮಾಡುವುದು ಸವಾಲಿನ ವಿಷಯವಾಗಿತ್ತು. ಮೊದಲ ಬಾರಿ ಟೆಸ್ಟ್ ಪಂದ್ಯ ಆಡಿದಂತೆ ಭಾಸವಾಯಿತು. ಪಿಚ್‌ನಲ್ಲಿ ಚೆಂಡು ಹೆಚ್ಚು ಬೌನ್ಸ್ ಆಗುತ್ತಿತ್ತು, 180 ರನ್ ಗಳಿಸಿದ್ದರೆ ಗೆಲ್ಲುವ ಅವಕಾಶವಿತ್ತು ಎಂದು ತಿಳಿಸಿದ್ದಾರೆ.
ತಂಡದ ಆಟಗಾರರ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ. ಈ ಸೀಸನ್‌ನಲ್ಲಿ ದಿನೇಶ್ ಕಾರ್ತಿಕ್, ರಜತ್ ಪಾಟಿದಾರ್, ಹರ್ಷಲ್ ಪಟೇಲ್ ಜತೆ ಇನ್ನು ಹಲವು ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ. ಮುಂದಿನ ಮೂರು ವರ್ಷಗಳವರೆಗೆ ಪ್ರತ್ಯೇಕ ಪ್ರಣಾಳಿಕೆಗಳಿದ್ದು, ಉತ್ತಮ ಪ್ರದರ್ಶನ ನೀಡಲು ಶ್ರಮಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ IPL2022 | ಈ ಬಾರಿಯೂ ಕೈ ತಪ್ಪಿದ ಕಪ್!: ಫೈನಲ್ಸ್‌ಗೆ ರಾಜಸ್ಥಾನ
ಯುವ ಆಟಗಾರರು ಪ್ರಾರಂಭದಲ್ಲಿ ಸ್ವಲ್ಪ ಅಡಚಣೆಗಳು ಎದುರಾದರೂ ಭವಿಷ್ಯದಲ್ಲಿ ಸೂಪರ್ ಸ್ಟಾರ್‌ಗಳಾಗುತ್ತಾರೆ. ರಜತ್ ಪಾಟಿದಾರ್ ಇದಕ್ಕೆ ಉದಾಹರಣೆಯಾಗಿದ್ದಾರೆ. ಭಾರತದಲ್ಲಿರುವ ಯುವ ಕ್ರಿಕೆಟರ್‌ಗಳಿಂದ ಮೂರು ಅಂತಾರಾಷ್ಟ್ರೀಯ ತಂಡಗಳನ್ನು ರಚಿಸಬಹುದು ಎಂದು ಪ್ರಶಂಸಿದ ಅವರು, ಫೈನಲ್‌ನಲ್ಲಿ ಆಡಲು ನಮಗಿಂತ ಆರ್‌ಆರ್ ತಂಡಕ್ಕೆ ಅರ್ಹತೆ ಹೆಚ್ಚಿದೆ ಎಂದರು.
ಭಾರತದದಲ್ಲಿ ಕ್ರಿಕೆಟ್‌ಗೆ ಹೆಚ್ಚಿನ ಜನಪ್ರಿಯತೆ ಇದೆ. ಯಾವ ನಗರಕ್ಕೆ ಹೋದರೂ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸಿಗುತ್ತಾರೆ. ಹೀಗಾಗಿಯೇ ಲೀಗ್ ಹಂದ ಮುಂಬೈ-ಡೆಲ್ಲಿ ಪಂದ್ಯದ ವೇಳೆ ಅಭಿಮಾನಿಗಳು ಆರ್‌ಸಿಬಿ ಹೆಸರು ಕೂಗುತ್ತಾ ಗಮನಸೆಳೆದರು. ಆರ್‌ಸಿಬಿ ಮತ್ತಷ್ಟು ಬಲವಾಗಿ ಕಮ್ ಬ್ಯಾಕ್ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ನಿರ್ಣಾಯಕ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಸೋತ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಈ ಸಲ ಕಪ್ ನಮ್ದೆ ಎಂದು ಹೇಳುತ್ತಿದ್ದ ಫ್ಯಾನ್ಸ್, ಆರ್‌ಸಿಬಿ ಸೋತರೂ ನೆಚ್ಚಿನ ತಂಡಕ್ಕೆ ಬೆಂಬಲ ಮುಂದುವರಿಯುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ.
ಮತ್ತೊಮ್ಮೆ ಕೈಕೊಟ್ಟ ಕೆಜಿಎಫ್
ಎಲಿಮಿನೇಟರ್ ಪಂದ್ಯದಂತೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಕೆಜಿಎಫ್ (ವಿರಾಟ್, ಗ್ಲೆನ್, ಫಾಫ್) ಮತ್ತೊಮ್ಮೆ ಕೈಕೊಟ್ಟಿದೆ. ವಿರಾಟ್ ಕೊಹ್ಲಿ(7 ರನ್), ಗ್ಲೆನ್ ಮ್ಯಾಕ್ಸ್‌ವೆಲ್ (24), ಫಾಫ್ ಡು ಪ್ಲೆಸಿಸ್(25) ಮೂಲಕ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗಿದ್ದಾರೆ. ಕನ್ನಡಿಗ ಪ್ರಸಿದ್ಧ ಕೃಷ್ಣ ಎಸೆದ 2ನೇ ಓವರ್‌ನಲ್ಲಿ ಕೊಹ್ಲಿ ವಿಕೆಟ್ ಕೀಪರ್ ಸಂಜು ಸ್ವಾಮ್ಸನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಇವರು ಈ ಪಂದ್ಯದಲ್ಲಿ ಮಿಂಚಿದ್ದರೆ ಆರ್‌ಸಿಬಿಗೆ ಗೆಲುವಿನ ಅವಕಾಶ ಹೆಚ್ಚಾಗಿತ್ತು.
ಇದನ್ನೂ ಓದಿ | IPL 2022 | ಪಾಟೀದಾರ್ ಅಬ್ಬರ, ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಪರ ದಾಖಲೆ ಸೃಷ್ಟಿ