Site icon Vistara News

Team India | ಡೆತ್‌ ಓವರ್‌ ಬೌಲಿಂಗ್‌ನಲ್ಲಿ ಮತ್ತೆ ವಿಫಲ; ಪಾಕ್‌ ವಿರುದ್ಧದ ಗೆಲುವಿನ ನಡುವೆಯೂ ಅದೇ ಚಿಂತೆ

team india

ಮೆಲ್ಬೋರ್ನ್‌ : ಭಾರತ ತಂಡವು ಪಾಕ್​ ವಿರುದ್ಧ ಟಿ೨೦ ವಿಶ್ವ ಕಪ್‌ ಪಂದ್ಯ ಗೆಲ್ಲುವ ಮೂಲಕ ಹಳೆ ಸೋಲಿಗೆಲ್ಲ ಸೇಡು ತಿರಿಸಿಕೊಂಡಿತು. ಅಭಿಮಾನಿಗಳೂ ಸಾಕಷ್ಟು ಖುಷಿಯಲ್ಲಿದ್ದಾರೆ. ಆದರೆ ಈ ಪಂದ್ಯ ಸಾಗಿದ ಹಾದಿ ನೋಡಿದಾಗ ಟೀಮ್‌ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಅದೇ ಚಿಂತೆ ಶುರುವಾಗಿದೆ. ಯಾಕೆಂದರೆ ಟೀಮ್‌ ಇಂಡಿಯಾದ ಆಟಗಾರರು ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ. ಸ್ವತಃ ನಾಯಕ ರೋಹಿತ್‌ ಶರ್ಮಹಾಗೂ ಕೋಚ್ ರಾಹುಲ್‌ ದ್ರಾವಿಡ್‌ಗೂ ಇರುಸು ಮುರುಸು ತಂದಿದೆ. ಅದುವೇ ಡೆತ್‌ ಓವರ್‌ ಬೌಲಿಂಗ್ ಚಿಂತೆ.

ಮೆಲ್ಬೋರ್ನ್​ ಅಂಗಳದಲ್ಲಿ ಭಾರತ ತಂಡ ಗೆದ್ದಿರುವ ಹೊರತಾಗಿಯೂ ಟೀಮ್ ಇಂಡಿಯಾದ ಡೆತ್ ಓವರ್ ಸಮಸ್ಯೆ ಮಾತ್ರ ಹಾಗೆ ಉಳಿದಿದೆ. ಪಾಕ್ ಎದುರು ಆರಂಭಿಕ ಹಂತದಲ್ಲಿ ಲಯಬದ್ಧವಾಗಿ ಕಾಣಿಸಿಕೊಂಡ ಬೌಲಗಳು ಬಳಿಕ ಡೆತ್​ ಓವರ್​ನಲ್ಲಿ ಮುಗ್ಗರಿಸಿದ್ದಾರೆ.

ಪಂದ್ಯದ ಆರಂಭಿಕ ಹಂತದಲ್ಲಿ ಭಾರತ ಬೌಲಗಳು ಪಾಕ್‌ ಬ್ಯಾಟರ್‌ಗಳಿಗೆ ಕಡಿವಾಣ ಹೇರಿದ್ರು.. ಇದರಿಂದ ಪಾಕ್​ ತಂಡ 140ರ ಗಡಿ ದಾಟುವುದು ದುಸ್ತರವಾಗಿತ್ತು. ಆದ್ರೆ, ಡೆತ್ ಓವರ್​ಗಳಲ್ಲಿ ಎಂದಿನಂತೆ ಮಾಡಿಕೊಂಡ ಎಡವಟ್ಟು ತಂಡಕ್ಕೆ ದುಬಾರಿ ಆಯಿತು. ಪಾಕಿಸ್ತಾನ 16 ಓವರ್​ಗೆ 116 ಮಾತ್ರ ಗಳಿಸಿತ್ತು. ಬಳಿಕ ಟೀಮ್ ಇಂಡಿಯಾ ಕಡೇ 4 ಓವರ್​ಗಳಲ್ಲಿ 43 ರನ್​ ಬಿಟ್ಟುಕೊಟ್ಟಿತ್ತು.

ಯುವ ಬೌಲರ್​ ಅರ್ಷದೀಪ್ ಪಾಕ್​ಗೆ ಆಘಾತ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಆದರೆ, ಡೆತ್ ಓವರ್​ನಲ್ಲಿ ಮಾತ್ರ ದುಬಾರಿಯಾಗಿದ್ದರು. ಪವರ್ ಪ್ಲೇ ಹಂತದಲ್ಲಿ ಎಸೆದ 2 ಓವರ್​ಗಳಲ್ಲಿ 9 ರನ್​ ನೀಡಿ 2 ವಿಕೆಟ್ ಕಬಳಿಸಿದ್ರು. ಆದ್ರೆ, 17 ಮತ್ತು 19ನೇ ಓವರ್​ನಲ್ಲಿ ಕ್ರಮವಾಗಿ 9 ಹಾಗೂ 14 ರನ್​ ನೀಡಿದ್ದಾರೆ.

18ನೇ ಓವರ್​ ಎಸೆದ ಮೊಹಮದ್ ಶಮಿ 10 ರನ್ ಬಿಟ್ಟುಕೊಟ್ಟರೆ , 20ನೇ ಓವರ್​ನಲ್ಲಿ ಭುವನೇಶ್ವರ್ ಕುಮಾರ್ ಕೂಡ 10 ರನ್ ಚಚ್ಚಿಸಿಕೊಂಡ್ರು. ಆ ತಂಡದ 8, 9ನೇ ಕ್ರಮಾಂಕದ ಬ್ಯಾಟರ್​ಗಳು ಬಂದು ಸಿಕ್ಸರ್ ಸಿಡಿಸುವಂತಾಯಿತು. ಇದಕ್ಕೆ ಡೆತ್ ಓವರ್ ನರ್ವಸೇ ಕಾರಣ ಎನ್ನಬಹುದು.

ಇನ್ನೂ ಸಿಕ್ಕಿಲ್ಲ ಪರಿಹಾರ

ಮೊದಲ ಪಂದ್ಯವೇ ಫೈನಲ್​ನಂತಿದ್ದು, ರೋಚಕ ಹಣಾಹಣಿಯಂತಿತ್ತು. ವಿಶ್ವಕಪ್​ ಮುಂಚಿತವಾಗಿನಿಂದಲೇ ಡೆತ್​ ಓವರ್​ ಸಮಸ್ಯೆ ಎದುರಿಸುತ್ತಿದ್ದ ಭಾರತ ಮತ್ತದೇ ಸಮಸ್ಯೆಗೆ ಗುರಿಯಾಗಿದೆ. ತವರಿನಲ್ಲಿ ನಡೆದ ಆಸೀಸ್, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲೂ ಭಾರತ ಇದೇ ವಿಭಾಗದಲ್ಲಿ ದುಬಾರಿಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲೆ ಈ ಸಮಸ್ಯೆ ಕಾಡಿದೆ.

ಇದನ್ನೂ ಓದಿ | IND vs PAK | ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿಯ ಸಾಮರ್ಥ್ಯ ಮತ್ತೊಮ್ಮೆ ಸಾಬೀತು

Exit mobile version